
ಸೋಮವಾರ, ಮಾರ್ಚ್ 20ರಂದು ಸಿಲ್ಹೆಟ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಮುಶ್ಫಿಕರ್ ರಹೀಮ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 9ನೇ ಶತಕ ಬಾರಿಸಿದರಲ್ಲದೆ, ಸಹ ಆಟಗಾರ ಶಕೀಬ್ ಅಲ್ ಹಸನ್ ಅವರ 14 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು.
35 ವರ್ಷದ ಮುಶ್ಫಿಕರ್ ರಹೀಮ್ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಪರ ಅತಿ ವೇಗದ ಶತಕ ಬಾರಿಸಿ ಶಕೀಬ್ ಅಲ್ ಹಸನ್ ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿದರು.
ಮುಶ್ಫಿಕರ್ ರಹೀಮ್ ಕೇವಲ 60 ಎಸೆತಗಳಲ್ಲಿ 100 ರನ್ ಗಳಿಸಿದ ನೆರವಿನಿಂದ ಆತಿಥೇಯ ಬಾಂಗ್ಲಾದೇಶ 6 ವಿಕೆಟ್‌ಗೆ 349 ರನ್ ಪೇರಿಸಿತು. ಇದು ಏಕದಿನ ಪಂದ್ಯಗಳ ಇತಿಹಾಸದಲ್ಲಿ ಅತ್ಯಧಿಕ ಮೊತ್ತವನ್ನು ದಾಖಲಿಸಿತು.
ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ಲೀಗ್‌ನಲ್ಲಿ ಹೊರಬಿದ್ದ ನಂತರ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮುಶ್ಫಿಕರ್ ರಹೀಮ್ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮವಾಗಿ ಹಿಂದಿರುಗಿದರು. ಶ್ರೀಲಂಕಾ ವಿರುದ್ಧ ಮೇ 2021ರ ಶತಕದ ನಂತರ ತಮ್ಮ 9ನೇ ಏಕದಿನ ಶತಕ ಬಾರಿಸಿದರು.

2ನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದ್ದಾಗ 34ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಮುಶ್ಫಿಕರ್ ರಹೀಮ್ 60 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 100 ರನ್ ಗಳಿಸಿದರು.
ಇದು ಬಾಂಗ್ಲಾದೇಶ ಆಟಗಾರನೊಬ್ಬ ಅತ್ಯಂತ ವೇಗವಾಗಿ ಶತಕ ಗಳಿಸಿದಂತಾಯಿತು. ಶಕೀಬ್ ಅಲ್ ಹಸನ್ 2009ರಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ್ದು, ಈ ಹಿಂದಿನ ವೇಗದ ಶತಕವಾಗಿತ್ತು.
ಇನ್ನು ಮುಶ್ಫಿಕರ್ ರಹೀಮ್ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಪರ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದರು. ತಮಿಮ್ ಇಕ್ಬಾಲ್ 14 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಶಕೀಬ್ ಅಲ್ ಹಸನ್ ಮತ್ತು ಮುಶ್ಫಿಕರ್ ರಹೀಮ್ ತಲಾ 9 ಶತಕಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಮುಶ್ಫಿಕರ್ ರಹೀಮ್ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಪರ 7000 ರನ್ ಬಾರಿಸಿದ ಮೂರನೇ ಆಟಗಾರ ಎನಿಸಿದರು. ಇದಕ್ಕೂ ಮುನ್ನ ತಮಿಮ್ ಇಕ್ಬಾಲ್ ಮತ್ತು ಶಕೀಬ್ ಅಲ್ ಹಸನ್ 7000 ರನ್ ಗಡಿ ದಾಟಿರುವ ಆಟಗಾರರಾಗಿದ್ದಾರೆ.
ಬಾಂಗ್ಲಾದೇಶ ಪರ ಅತಿ ವೇಗವಾಗಿ ಏಕದಿನ ಶತಕ ಬಾರಿಸಿದವರ ಪಟ್ಟಿ
ಮುಶ್ಫಿಕರ್ ರಹೀಮ್ - ಐರ್ಲೆಂಡ್ ವಿರುದ್ಧ 60 ಎಸೆತಗಳಲ್ಲಿ ಶತಕ - 2023
ಶಕೀಬ್ ಅಲ್ ಹಸನ್ - ಜಿಂಬಾಬ್ವೆ ವಿರುದ್ಧ 63 ಎಸೆತಗಳಲ್ಲಿ ಶತಕ - 2009
ಶಕೀಬ್ ಅಲ್ ಹಸನ್ - ಜಿಂಬಾಬ್ವೆ ವಿರುದ್ಧ 68 ಎಸೆತಗಳಲ್ಲಿ ಶತಕ - 2009
ಮುಶ್ಫಿಕರ್ ರಹೀಮ್ - ಪಾಕಿಸ್ತಾನ ವಿರುದ್ಧ 69 ಎಸೆತಗಳಲ್ಲಿ ಶತಕ - 2015
ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುನ್ನ ಮುಶ್ಫಿಕರ್ ರಹೀಮ್ ಬ್ಯಾಟಿಂಗ್ ಫಾರ್ಮ್‌ಗೆ ಮರಳಿರುವುದು ಬಾಂಗ್ಲಾದೇಶಕ್ಕೆ ಉತ್ತಮ ಸೂಚಕವಾಗಿದೆ.

ಬಾಂಗ್ಲಾದೇಶ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 349 ರನ್ ಗಳಿಸಿದ ನಂತರ ಮಳೆ ಸುರಿಯಿತು. ಐರ್ಲೆಂಡ್ ಒಂದು ಬಾಲ್ ಎದುರಿಸಲೂ ಸಹ ಅವಕಾಶ ಕೊಡಲಿಲ್ಲ. ಹೀಗಾಗಿ ಎರಡನೇ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಯಿತು.
ಶನಿವಾರ, ಮಾರ್ಚ್ 18ರಂದು ಬಾಂಗ್ಲಾದೇಶ ತಂಡ ಮೊದಲ ಏಕದಿನ ಪಂದ್ಯವನ್ನು 183 ರನ್‌ಗಳಿಂದ ಗೆದ್ದುಕೊಂಡಿತ್ತು.