ಟೀಮ್ ಇಂಡಿಯಾ ಈ ಬಾರಿ ವಿಶ್ವಕಪ್ ನಲ್ಲಿ ನೀಡುತ್ತಿರುವ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸೊಗಸಾದ ಪ್ರದರ್ಶನ ನೀಡುತ್ತಿರುವ ರೋಹಿತ್ ಪಡೆ ಅಬ್ಬರಿಸುತ್ತಿದೆ. ಅದರಲ್ಲೂ ಟೀಮ್ ಇಂಡಿಯಾದ ಬೆಂಚ್ ಸ್ಟ್ರೆಂಥ್ ಸಕತ್ ಆಗಿದೆ. ಆಟಗಾರರು ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಂಡು ಅಬ್ಬರಿಸುತ್ತಿದ್ದಾರೆ. ಅವಕಾಶ ವಂಚಿತರು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಈ ವಿಶ್ವಕಪ್‌ನಲ್ಲಿ ಕೇವಲ 2 ಪಂದ್ಯ ಆಡಿ ಹೊಸ ಅಲೆಯನ್ನು ಎಬ್ಬಿಸಿರುವ ಟೀಮ್ ಇಂಡಿಯಾದ ವೇಗಿ, ವಿಶ್ವದ ನಂಬರ್ 2 ಬೌಲರ್ ಸ್ಥಾನಕ್ಕೆ ಕುತ್ತು ತಂದಿದ್ದಾನೆ.
ಹೌದು, ಏಷ್ಯಾ ಕಪ್ ಫೈನಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದ ಹೈದರಾಬಾದ್ ನ ಮೊಹಮ್ಮದ್ ಸಿರಾಜ್, ವಿಶ್ವಕಪ್ ನಲ್ಲಿ ಮಂಕಾದಂತೆ ಕಾಣುತ್ತಿದೆ. ಮೊಹಮ್ಮದ್ ಸಿರಾಜ್ ಅವರ ಫಾರ್ಮ್ ಟೀಂ ಇಂಡಿಯಾಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿತು. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ 6.3 ಓವರ್ ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದರು.

ಮೊಹಮ್ಮದ್ ಸಿರಾಜ್ ಅಫ್ಘಾನಿಸ್ತಾನ ವಿರುದ್ಧ ಅತ್ಯಂತ ದುಬಾರಿ ಎನಿಸಿದರು. ಈ ಪಂದ್ಯದಲ್ಲಿ, ಮೊಹಮ್ಮದ್ ಸಿರಾಜ್ ಅವರ 9 ಓವರ್‌ಗಳಲ್ಲಿ ಅಫ್ಘಾನ್ ಬ್ಯಾಟ್ಸ್‌ಮನ್‌ಗಳು 76 ರನ್ ಗಳಿಸಿದರು, ಆದರೆ ಈ ಬೌಲರ್‌ಗೆ ಯಶಸ್ಸು ಸಿಗಲಿಲ್ಲ. ಪಾಕಿಸ್ತಾನದ ವಿರುದ್ಧ ಮೊಹಮ್ಮದ್ ಸಿರಾಜ್ 8 ಓವರ್‌ಗಳಲ್ಲಿ 50 ರನ್‌ಗಳಿಗೆ 2 ವಿಕೆಟ್ ಪಡೆದರು. ಇದಾದ ಬಳಿಕ ಬಾಂಗ್ಲಾದೇಶ ವಿರುದ್ಧ ಮೊಹಮ್ಮದ್ ಸಿರಾಜ್ 10 ಓವರ್ ಗಳಲ್ಲಿ 60 ರನ್ ನೀಡಿ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಅವರ 10 ಓವರ್‌ಗಳಲ್ಲಿ ಕಿವೀಸ್ ಬ್ಯಾಟ್ಸ್‌ಮನ್‌ಗಳು 45 ರನ್ ಗಳಿಸಿದರೆ, ಈ ಬೌಲರ್ 1 ವಿಕೆಟ್ ಪಡೆದರು.
ವಿಶ್ವಕಪ್ ನಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದ ಬಳಿಕ ತಂಡಕ್ಕೆ ಎಂಟ್ರಿ ನೀಡಿರುವ ಮೊಹಮ್ಮದ್ ಶಮಿ, ತಮ್ಮ ಸ್ವಿಂಗ್ ಹಾಗೂ ವೇಗದ ಬೌಲಿಂಗ್ ಮೂಲಕ ಅಬ್ಬರಿಸುತ್ತಿದ್ದಾರೆ. ಶಮಿ ಅವರ ಬೆಂಕಿಯಂತಹ ಚೆಂಡುಗಳನ್ನು ಎದುರಿಸುವಲ್ಲಿ ಬ್ಯಾಟರ್ ಗಳು ವಿಫಲರಾಗುತ್ತಿದ್ದಾರೆ. ಕೇವಲ ಆಡಿದ 2ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿರುವ ಶಮಿ, ತಂಡದಲ್ಲಿ ತಮಗೆ ಸ್ಥಾನವನ್ನು ನೀಡುವಂತೆ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ. ಶಮಿ ಆಡಿದ 2 ಪಂದ್ಯಗಳಲ್ಲಿ ಬರೋಬ್ಬರಿ 9 ವಿಕೆಟ್ ಕಬಳಿಸಿದ್ದಾರೆ.
ಶಮಿ ಅವರ ಈ ಅಮೋಘ ಪ್ರದರ್ಶನ ಟೀಮ್ ಇಂಡಿಯಾಕ್ಕೆ ನೆರವಾಗಿದೆ. ಹೀಗಾಗಿ ಶಮಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಫಿಕ್ಸ್. ಹಾಗದರೆ ಶಮಿ ತಂಡದಲ್ಲಿ ಸ್ಥಾನ ಪಡೆದರೆ, ಸಿರಾಜ್ ಗೆ ಗೇಟ್ ಪಾಸ್ ಸಿಗುವು ಸಾಧ್ಯತೆ ಹೆಚ್ಚಿದೆ. ಏಕಂದರೆ ಜಸ್ಪ್ರಿತ್ ಬುಮ್ರಾ ಸಹ ಬೌಲಿಂಗ್ ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದರೆ ಸಿರಾಜ್ ಸ್ಥಾನ ಅಪಾಯಕ್ಕೆ ಸಿಲುಕಲಿದೆ. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಕೂಡ ವಿಫಲವಾಗಿದ್ದು ಅವರ ಬದಲಾಗಿ ಪಾಂಡ್ಯ ತಂಡಕ್ಕೆ ಮರಳಿದರೆ, ಸಿರಾಜ್ ಮುಂದುವರೆಯಲಿದ್ದಾರೆ.