ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದು ಆರಂಭಿಕನಾಗಿ ಕಣಕ್ಕಿಳದ ಯುವ ಕ್ರಿಕೆಟಿಗ ಇಶಾನ್ ಕಿಶನ್. ಸರಣಿಯ ಮೂರು ಪಂದ್ಯಗಳಲ್ಲಿಯೂ ಇಶಾನ್ ಆರಂಭಿಕನಾಗಿ ಭರ್ಜರಿ ಯಶಸ್ಸು ಸಾಧಿಸಿದ್ದು ಮೂರು ಪಂದ್ಯಗಳಲ್ಲಿಯೂ ಅರ್ಧ ಶತಕ ಸಿಡಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಸರಣಿಯಲ್ಲಿ ನಿರ್ಣಾಯಕವೆನಿಸಿದ್ದ ಅಂತಿಮ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ಗೆ ಭದ್ರಬುನಾದಿ ಹಾಕಿಕೊಟ್ಟಿದ್ದು ಇಶಾನ್ ಕಿಶನ್. ಶುಬ್ಮನ್ ಗಿಲ್ ಜೊತೆಗೆ ಸೇರಿಕೊಂಡು ಅದ್ಭುತ ಪ್ರದರ್ಶನ ನೀಡಿದ ಇಶಾನ್ ಕಿಶನ್ 64 ಎಸೆತಗಳಲ್ಲಿ 77 ರನ್‌ಗಳನ್ನು ಸಿಡಿಸಿ ಅಬ್ಬರಿಸಿದರು. ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿತ್ತು.

ಇನ್ನು ಇದಕ್ಕೂ ಹಿಂದಿನ ಎರಡು ಪಂದ್ಯಗಳಲ್ಲಿಯೂ ಇಶಾನ್ ಅರ್ಧ ಶತಕದ ಕೊಡುಗೆ ನಿಡಿದ್ದರು ಎಂಬುದು ಗಮನಾರ್ಹ. ಸರಣಿಯ ಮೊದಲ ಪಂದ್ಯದಲ್ಲಿ 52 ರನ್‌ಗಳನ್ನು ಗಳಿಸಿದ್ದ ಇಶಾನ್ ಎರಡನೇ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ್ದರೂ ಇಶಾನ್ ಕಿಶನ್ ಬ್ಯಾಟಿಂಗ್‌ನಲ್ಲಿ 55 ರನ್‌ಗಳ ಅದ್ಭುತ ಕೊಡುಗೆ ನೀಡಿದ್ದರು.
ಇನ್ನು ಮೂರನೇ ಏಕಸಿನ ಪಂದ್ಯದಲ್ಲಿ ಇಶಾನ್ ಕಿಶನ್ ತಮ್ಮ 6ನೇ ಅಂತಾರಾಷ್ಟ್ರೀಯ ಏಕದಿನ ಅರ್ಧ ಶತಕ ಸಿಡಿಸಿದ್ದಾರೆ. ಇದಕ್ಕೆ ವರು 43 ಎಸೆತಗಳನ್ನು ಬಳಸಿದ್ದು ಐದು ಬೌಂಡರಿ ಹಾಗೂ 2 ಸಿಕಕ್ಸರ್ ಸಿಡಿಸಿದ್ದರು. ಈ ಅರ್ಧ ಶತಕಸದ ಮೂಲಕ ಮೂರು ಪಂದ್ಯಗಳ ಏಕದಿಕ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿಯೂ ಅರ್ಧ ಶತಕ ಸಿಡಿಸಿದ ಭಾರತದ ಆರನೇ ಬ್ಯಾಟರ್ ಎಂಬ ಹೆಗ್ಗಳಿಕೆಎ ಪಾತ್ರವಾಗಿದ್ದಾರೆ. ಈ ಸಾಧನೆ ಮಾಡಿದ ಉಳಿದ ಬ್ಯಾಟರ್‌ಗಳು ಎಂದರೆ ಕ್ರಿಸ್ ಶ್ರೀಕಾಂತ್, ದಿಲಿಪ್ ವೆಂಗ್‌ಸರ್ಕಾರ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ ಹಾಗೂ ಶ್ರೇಯಸ್ ಐಯ್ಯರ್.
ಶ್ರೀಕಾಂತ್ 1982ರಲ್ಲಿ ಶ್ರೀಲಂಕಾ ವಿರುದ್ಧ ಸತತ ಮೂರು ಅರ್ಧ ಶತಕ ಸಿಡಿಸಿದ್ದರು. ಇನ್ನು ವೆಂಗ್‌ಸರ್ಕಾರ್ ಹಾಗೂ ಮೊಹಮ್ಮದ್ ಅಜರುದ್ದೀನ್ ಅವರ ಈ ಸಾಧನೆ ಕೂಡ ಶ್ರೀಲಂಕಾ ವಿರುದ್ಧವೇ ಬಂದಿದ್ದು ಕ್ರಮವಾಗಿ 1985 ಹಾಗೂ 1993ರಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೂರು ಅರ್ಧ ಶತಕ ಸಿಡಿಸಿ ಈ ದಾಖಲೆ ಬರೆದಿದ್ದರು. ಇನ್ನು ಅದೇ ವರ್ಷ ಶ್ರೇಯಸ್ ಐಯ್ಯರ್ ನ್ಯೂಜಿಲೆಂಡ್ ವಿರುದ್ಧ ಇದೇ ಸಾಧನೆ ಮಾಡಿದ್ದರು.
ಸರಣಿಯ ನಿರ್ಣಾಯಕವೆನಿಸಿಕೊಂಡಿದ್ದ ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದು ಮಿಂಚಿದ ಟೀಮ್ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ ಅಮೋಘ 351/5 ರನ್‌ಗಳನ್ನು ಬಾರಿಸಿತು. ಇದಕ್ಕೆ ಪ್ರತಿಯಾಗಿ ಬೌಲಿಂಗ್‌ನಲ್ಲಿಯೂ ಅಷ್ಟೇ ಅದ್ಭುತ ಪ್ರದರ್ಸನ ನೀಡಿದ ಟೀಮ್ ಇಂಡಿಯಾ ವೆಸ್ಟ ಇಂಡೀಸ್ ತಂಡವನ್ನು ಕೇವಲ 151 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭಾರೀ ಗೆಲುವು ಸಾಧಿಸಿತು. ಭರ್ಜರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದ ಮೂಲಕ ಟೀಮ್ ಇಂಡಿಯಾ 200 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಅಲ್ಲದೆ ಮೂರು ಪಂದ್ಯಗಳ ಈ ಏಕದಿನ ಪಂದ್ಯದಲ್ಲಿ 2-1 ಅಂತರದಿಂದ ಗೆಲುವು ಸಾಧಿಸಿ ಸರಣಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾದ ಸಂಘಟಿತ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.