
ಮುಂದಿನ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಇಶಾನ್ ಕಿಶನ್ ಖಚಿತ ಓಪನಿಂಗ್ ಬ್ಯಾಟ್ಸ್‌ಮನ್ ಆಗಿರಬೇಕು ಮತ್ತು ಭಾರತ ತಂಡದ ಮ್ಯಾನೇಜ್‌ಮೆಂಟ್ ಭವಿಷ್ಯದ ಮೇಲೆ ಕಣ್ಣಿಟ್ಟು ಆತನನ್ನು ಬೆಂಬಲಿಸಬೇಕು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಹೇಳಿದರು.
ಇಶಾನ್ ಕಿಶನ್ ಬಾಂಗ್ಲಾದೇಶದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅದ್ಭುತ 210 ರನ್‌ಗಳೊಂದಿಗೆ ಭಾರತದ ಆರಂಭಿಕ ಸ್ಥಾನಕ್ಕಾಗಿ ತಮ್ಮ ಹೆಸರನ್ನು ಸೇರಿಸಿದರು. ಮುಂದಿನ ವರ್ಷ ವಿಶ್ವಕಪ್ ತಂಡಕ್ಕೆ ಶಿಖರ್ ಧವನ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಫಾರ್ಮ್‌ಗಾಗಿ ಹೋರಾಡುತ್ತಿರುವುದರಿಂದ ಎಡಗೈ ಯುವ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ.
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಬ್ರೆಟ್ ಲೀ, ಇಶಾನ್ ಕಿಶನ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್ ತೆರೆಯುವ ಬಲವಾದ ಹಕ್ಕು ಸಾಧಿಸಿದ್ದಾರೆ. 24 ವರ್ಷ ವಯಸ್ಸಿನ ಕಿಶನ್ ಸ್ಥಿರತೆಯನ್ನು ತೋರಿಸಲು ಮತ್ತು ಫಿಟ್ ಆಗಿ ಉಳಿಯಲು ಸಾಧ್ಯವಾದರೆ, ಅವರು ಭಾರತ ತಂಡಕ್ಕೆ ಖಚಿತವಾದ ಆರಂಭಿಕ ಆಟಗಾರನಾಗಬೇಕು ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಹೇಳಿದರು.

"ಈ ಅತ್ಯದ್ಭುತ ದ್ವಿಶತಕದೊಂದಿಗೆ 2023ರಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ಇನ್ನಿಂಗ್ಸ್ ತೆರೆಯಲು ಇಶಾನ್ ಕಿಶನ್ ಬಲವಾದ ಹಕ್ಕನ್ನು ಹೊಂದಿದ್ದಾರೆ. ಇದು ಸಂಭವಿಸುತ್ತದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಆತನೇ ಇನ್ನಿಂಗ್ಸ್ ಆರಂಭಿಸಬೇಕು. ಏಕದಿನ ಇತಿಹಾಸದಲ್ಲಿ ಅತ್ಯಂತ ವೇಗದ 200 ರನ್ ಗಳಿಸಿದ್ದಾನೆ. ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಸ್ಥಿರತೆಯನ್ನು ತೋರಿಸಿದರೆ, ಮುಂದಿನ ಕೆಲವು ತಿಂಗಳುಗಳಲ್ಲಿ ಫಿಟ್ ಆಗಿ ಉಳಿಯಲು ಸಾಧ್ಯವಾದರೆ, ಅವರು ವಿಶ್ವಕಪ್‌ನಲ್ಲಿ ಭಾರತಕ್ಕೆ ಖಚಿತವಾಗಿ ಓಪನರ್ ಆಗಿರಬೇಕು," ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅಭಿಪ್ರಾಯಪಟ್ಟರು.
ಭವಿಷ್ಯದ ಮೇಲೆ ಕಣ್ಣಿಟ್ಟು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಇಶಾನ್ ಕಿಶನ್‌ನನ್ನು ಭಾರತ ತಂಡದ ಮ್ಯಾನೇಜ್‌ಮೆಂಟ್ ಬೆಂಬಲಿಸಬೇಕು. ತನ್ನ ದ್ವಿಶತಕದ ಸುತ್ತಲಿನ ಸಂಭ್ರಮವನ್ನು ಮರೆತು ಸ್ಥಿರತೆ ಕಡೆ ಗಮನ ಕೇಂದ್ರೀಕರಿಸಲು 24 ವರ್ಷದ ಆಟಗಾರನಿಗೆ ಮಾಜಿ ವೇಗಿ ಬ್ರೆಟ್ ಲೀ ಸಲಹೆ ನೀಡಿದರು.

ಏಕದಿನ ಕ್ರಿಕೆಟ್‌ನಲ್ಲಿ ಇಶಾನ್ ಕಿಶನ್ ವೇಗದ ದ್ವಿಶತಕ ಇತಿಹಾಸವಾಗಿದೆ. ಕೇವಲ 132 ಎಸೆತಗಳಲ್ಲಿ 24 ಬೌಂಡರಿ ಮತ್ತು 10 ಬೃಹತ್ ಸಿಕ್ಸರ್ ಒಳಗೊಂಡ 210 ರನ್ ಬಾರಿಸಿರುವುದು ಅದ್ಭುತವೇ ಸರಿ ಎಂದು ಬ್ರೆಟ್ ಲೀ ಹೊಗಳಿದರು.
ಇನ್ನು ಶ್ರೀಲಂಕಾ ತಂಡವು ಜನವರಿ 3ರಿಂದ ಜನವರಿ 15ರವರೆಗೆ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ಭಾರತದ ಪ್ರವಾಸ ಕೈಗೊಳ್ಳಲಿದೆ.