2023ರ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆಯನ್ನು ಎದುರಿಸುತ್ತಿದೆ. ಖಾಯಂ ಬ್ಯಾಟರ್‌ಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ತಮ್ಮ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ಏಷ್ಯಾ ಕಪ್ ಮತ್ತು ವಿಶ್ವಕಪ್ ಪಂದ್ಯಾವಳಿಗಳಿಗೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಸಮಯಕ್ಕೆ ಚೇತರಿಸಿಕೊಳ್ಳದಿದ್ದರೆ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಭಾರತದ ಮಧ್ಯಮ ಕ್ರಮಾಂಕಕ್ಕೆ ಉತ್ತಮ ಆಯ್ಕೆಯಾಗುತ್ತಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಂ ಅಭಿಪ್ರಾಯಪಟ್ಟಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಭಾರತ ತಂಡಕ್ಕೆ ಇನ್ನಿಂಗ್ಸ್ ತೆರೆಯುವಾಗ ಎಲ್ಲಾ ಮೂರು ಏಕದಿನ ಪಂದ್ಯಗಳಲ್ಲಿ ಅರ್ಧಶತಕಗಳನ್ನು ಬಾರಿಸಿದರು.

25 ವರ್ಷದ ಇಶಾನ್ ಕಿಶನ್ ಆಡಿದ 17 ಏಕದಿನ ಪಂದ್ಯಗಳಿಂದ 694 ರನ್ ಗಳಿಸಿದ್ದಾರೆ, ಇದರಲ್ಲಿ ಬಾಂಗ್ಲಾದೇಶ ವಿರುದ್ಧ 210 ರನ್‌ಗಳ ದಾಖಲೆಯ ದ್ವಿಶತಕ ಕೂಡ ಸೇರಿದೆ.
ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಅವರನ್ನು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್‌ಗೆ ಸಂಭಾವ್ಯ ಬದಲಿ ಆಟಗಾರರೆಂದು ಪರಿಗಣಿಸಲಾಗಿದೆ.
2023ರ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ತೊಡೆಯ ಗಾಯಕ್ಕೆ ತುತ್ತಾದ ನಂತರ, ಕ್ರಿಕೆಟ್‌ನಿಂದ ದೂರವುಳಿದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕೆಎಸ್ ಭರತ್ ನಂತರ, ಇಶಾನ್ ಕಿಶನ್ ಎರಡನೇ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದರು.

ಇನ್ನು ನಿರಂತರ ಬೆನ್ನಿನ ನೋವಿನಿಂದಾಗಿ ಶ್ರೇಯಸ್ ಅಯ್ಯರ್ ಐಪಿಎಲ್ 2023ರಿಂದ ಹಿಂದೆ ಸರಿದರು. ಇದು ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ನೀಡಲು ಬಲವಾದ ಕಾರಣವಾಯಿತು.
ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಸಬಾ ಕರೀಂ ಅವರು ಮುಂಬರುವ 2023ರ ಏಷ್ಯಾ ಕಪ್ ಮತ್ತು ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್ ಆಗಿರದಿದ್ದರೆ, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಸೂಕ್ತ ಬದಲಿ ಆಯ್ಕೆಗಳಾಗಿವೆ ಎಂದು ಸಲಹೆ ನೀಡಿದ್ದಾರೆ.
ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಇಶಾನ್ ಕಿಶನ್ ಅವರ ಲಭ್ಯವು ಕೆಎಲ್ ರಾಹುಲ್‌ಗೆ ಉತ್ತಮ ಬದಲಿ ಆಯ್ಕೆಯಾಗಿರುತ್ತದೆ ಎಂದು ಸಬಾ ಕರೀಂ ಅಭಿಪ್ರಾಯಪಟ್ಟರು.

ಇನ್ನು ಸೂರ್ಯಕುಮಾರ್ ಯಾದವ್ ಅವರ ದೇಶೀಯ ಮತ್ತು ಅಂತಾರಾಷ್ಟ್ರೀಯವಾಗಿ ಏಕದಿನ ಕ್ರಿಕೆಟ್‌ನಲ್ಲಿನ ಅನುಭವವು ಶ್ರೇಯಸ್ ಅಯ್ಯರ್ ಬದಲಿಗೆ ಪ್ರಬಲ ಅಭ್ಯರ್ಥಿಯನ್ನಾಗಿ ಮಾಡುತ್ತದೆ ಎಂದಿದ್ದಾರೆ.
"ಭಾರತೀಯ ಆಯ್ಕೆಗಾರರು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಮೊದಲು ಪರಿಗಣನೆಗೆ ತೆಗೆದುಕೊಳ್ಳಬೇಕು, ಅವರು ಫಿಟ್ ಆಗಿದ್ದರೆ ತಂಡಕ್ಕೆ ಸೇರಿಸಿಕೊಳ್ಳಬಹುದು. ನನಗೆ ತಿಳಿದಿರುವ ಪ್ರಕಾರ, ಆಗಸ್ಟ್ 20ರಂದು ತಂಡವನ್ನು ಪ್ರಕಟಿಸಲಾಗುವುದು, ಅಲ್ಲಿಯವರೆಗೆ ಅವರಿಗೆ ಸಮಯವಿದೆ," ಎಂದು ಸಬಾ ಕರೀಂ ತಿಳಿಸಿದರು.
"ಆದರೆ, ಅವರು ಫಿಟ್ ಆಗಿಲ್ಲವಾದರೆ, ಕೆಎಲ್ ರಾಹುಲ್ ಬದಲಾಗಿ ಇಶಾನ್ ಕಿಶನ್ ಆಯ್ಕೆ ಮಾಡಬಹುದು. ಏಕೆಂದರೆ ಅವರು ವಿಕೆಟ್ ಕೀಪರ್ ಆಗಿ, ಆರಂಭಿಕರಾಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ ಫಿಟ್ ಆಗಿಲ್ಲದಿದ್ದರೆ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಂದ ಆಯ್ಕೆ ಮಾಡಲು ನಿಮಗೆ 2-3 ಆಯ್ಕೆಗಳಿವೆ".
"ಆದರೆ ನನಗೆ, ಸೂರ್ಯಕುಮಾರ್ ಯಾದವ್ ಅವರು ದೇಶೀಯ ಮತ್ತು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ ಅನುಭವವನ್ನು ಗಳಿಸಿದ್ದಾರೆ. ನಾನು ಈಗಲೂ ಸೂರ್ಯಕುಮಾರ್ ಯಾದವ್ ಅವರನ್ನು ಬೆಂಬಲಿಸುತ್ತೇನೆ," ಎಂದು ಮಾಜಿ ಕ್ರಿಕೆಟಿಗ ಸಬಾ ಕರೀಂ ಹೇಳಿದರು.