ಪಾಕ್ ಸ್ಟಾರ್ ಕ್ರಿಕೆಟಿಗರ ಕರ್ಮಕಾಂಡ: ಬಾಬರ್ ನಂತರ ಮತ್ತೋರ್ವನ ವಿರುದ್ಧ ಅತ್ಯಾಚಾರ ಆರೋಪ!

ಪಾಕಿಸ್ತಾನದ ಕ್ರಿಕೆಟಿಗರಿಗೂ ವಿವಾದಗಳಿಗೂ ಯಾವ ಜನ್ಮದ ಅನುಬಂಧವೋ ಏನೋ ಪದೇ ಪದೇ ಪಾಕ್ ಆಟಗಾರರು ಒಂದಲ್ಲ ಒಂದು ವಿವಾದಕ್ಕೆ ಸಿಲುಕಿ ಹಾಕಿಕೊಳ್ಳುತ್ತಲೇ ಇರುತ್ತಾರೆ. ಮ್ಯಾಚ್ ಫಿಕ್ಸಿಂಗ್, ಬಾಲ್ ಟ್ಯಾಂಪರಿಂಗ್ ವಿವಾದಗಳಿಗೆ ಹೆಚ್ಚು ಸಿಲುಕಿ ಹಾಕಿಕೊಳ್ಳುವ ಪಾಕಿಸ್ತಾನದ ಕ್ರಿಕೆಟಿಗರು ಲೈಂಗಿಕ ಪ್ರಕರಣಗಳು ಮತ್ತು ಅತ್ಯಾಚಾರ ಆರೋಪಗಳ ಕರ್ಮಕಾಂಡಕ್ಕೂ ಕೂಡ ಒಳಗಾಗಿದ್ದಾರೆ. ಈ ಕುರಿತು ಕೆಲವೊಂದಿಷ್ಟು ಪಾಕಿಸ್ತಾನ ಕ್ರಿಕೆಟಿಗರ ಕುರಿತು ಈ ಹಿಂದೆ ನಾವೆಲ್ಲರೂ ಕೇಳಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣದ ಕುರಿತು ವರದಿಯಾಗಿದ್ದು ಪಾಕಿಸ್ತಾನದ ಪ್ರಮುಖ ಸ್ಪಿನ್ನರ್ ಈ ಬಾರಿ ಅತ್ಯಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ.
ಹೌದು, ಪಾಕಿಸ್ತಾನದ ಪ್ರಮುಖ ಲೆಗ್ ಸ್ಪಿನ್ನರ್ ಯಾಸಿರ್ ಷಾ ಅವರ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು ಇಸ್ಲಾಮಾಬಾದ್ ಆರಕ್ಷಕ ಠಾಣೆಯೊಂದರಲ್ಲಿ ಯಾಸಿರ್ ಶಾ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಿಕೊಂಡಿದ್ದು ಈ ಪ್ರಕರಣದ ಕುರಿತು ತನಿಖೆ ಆರಂಭಿಸಿ ಸತ್ಯವನ್ನು ಶೀಘ್ರದಲ್ಲಿಯೇ ಆಚೆ ತರಲಿದ್ದಾರೆ ಎನ್ನಲಾಗುತ್ತಿದೆ. ಪಾಕಿಸ್ತಾನದ 14 ವರ್ಷದ ಅಪ್ರಾಪ್ತೆಯೋರ್ವಳು ಯಾಸಿರ್ ಷಾ ವಿರುದ್ಧ ಅತ್ಯಾಚಾರ ಹಾಗೂ ಮದುವೆಗೆ ಬಲಾತ್ಕಾರ ಮಾಡಿದ ಆರೋಪವನ್ನು ಉಲ್ಲೇಖಿಸಿ ದೂರು ದಾಖಲಿಸಿದ್ದಾಳೆ.
ಬಾಲಕಿ ದಾಖಲಿಸಿರುವ ದೂರಿನಲ್ಲಿ ಯಾಸಿರ್ ಷಾ ಜತೆಗೆ ಆತನ ಸ್ನೇಹಿತ ಫರ್ಹಾನ್ ಹೆಸರನ್ನು ಸೇರಿಸಿದ್ದು ಯಾಸಿರ್ ಷಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ತನ್ನ ಸ್ನೇಹಿತ ಫರ್ಹಾನ್ ಜೊತೆ ವಿವಾಹವಾಗಬೇಕೆಂದು ಬೆದರಿಕೆ ಹಾಕಿದ್ದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಹೊರಗಡೆ ಬಾಯಿ ಬಿಡದಂತೆ ತನ್ನನ್ನು ಬೆದರಿಸಿದ್ದ ಎಂದು ಸಹ ಬಾಲಕಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಸದ್ಯ ಬಾಲಕಿ ಮಾಡಿರುವ ಈ ಗಂಭೀರ ಆರೋಪ ಕ್ರಿಕೆಟ್ ಜಗತ್ತನ್ನು ಬೆಚ್ಚಿ ಬೀಳಿಸುತ್ತಿದ್ದು ಶಾಲೆ ಕಲಿಯುವ ಬಾಲಕಿ ಮೇಲೆ 35 ವರ್ಷದ ಕ್ರಿಕೆಟಿಗ ಅತ್ಯಾಚಾರ ಮಾಡುವುದೆಂದರೇನು, ಓರ್ವ ಅಂತರರಾಷ್ಟ್ರೀಯ ಅನುಭವೀ ಕ್ರಿಕೆಟಿಗನಾಗಿ ಇತರರಿಗೆ ಮಾದರಿಯಾಗುವುದನ್ನು ಬಿಟ್ಟು ಇಂತಹ ಹೀನ ಕೃತ್ಯ ಎಸಗುವುದು ಎಂದರೇನು ಎಂದು ಯಾಸಿರ್ ಶಾ ವಿರುದ್ಧ ಕ್ರಿಕೆಟ್ ಜಗತ್ತು ಕಿಡಿಕಾರುತ್ತಿದೆ.

ಬಾಲಕಿಯ ವೈದ್ಯಕೀಯ ಪರೀಕ್ಷೆ ನಂತರ ಮುಂದಿನ ಕ್ರಮ
14 ವರ್ಷದ ಬಾಲಕಿ ಇಸ್ಲಾಮಾಬಾದ್ ಆರಕ್ಷಕ ಠಾಣೆಯೊಂದರಲ್ಲಿ ಯಾಸಿರ್ ಶಾ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಆರೋಪವನ್ನು ಮಾಡಿ ದೂರನ್ನು ದಾಖಲಿಸಲಿದ್ದು, ಪೊಲೀಸರು ಈ ಕುರಿತಾಗಿ ಆ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬಾಬರ್ ಅಜಮ್ ಕೂಡ ಇದೇ ರೀತಿಯ ಆರೋಪವನ್ನು ಎದುರಿಸಿದ್ದರು!
ಈ ರೀತಿಯ ಅತ್ಯಾಚಾರದ ಆರೋಪವನ್ನು ಎದುರಿಸುತ್ತಿರುವ ಪಾಕಿಸ್ತಾನದ ಮೊದಲ ಕ್ರಿಕೆಟಿಗ ಯಾಸಿರ್ ಷಾ ಅಲ್ಲ. ಈ ಹಿಂದೆ ಇದೇ ರೀತಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಮತ್ತು ದಿಗ್ಗಜ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಅತ್ಯಾಚಾರ ಆರೋಪಗಳನ್ನು ಎದುರಿಸಿದ್ದರು. ವಿಪರ್ಯಾಸವೆಂದರೆ ಪಾಕಿಸ್ತಾನ ಕ್ರಿಕೆಟಿಗರ ವಿರುದ್ಧ ಇದುವರೆಗೂ ದಾಖಲಾಗಿರುವ ಯಾವುದೇ ಅತ್ಯಾಚಾರದ ಪ್ರಕರಣಗಳು ಕೂಡ ಸಾಬೀತಾಗಿಲ್ಲ.

ಆಟಗಾರನಾಗಿ ಯಾಸೀರ್ ಶಾ ಸಾಧನೆ
ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಯಾಸಿರ್ ಶಾ ಇದುವರೆಗೂ ಒಟ್ಟು 46 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದು 235 ವಿಕೆಟ್‍ಗಳನ್ನು ಪಡೆದು ಮಿಂಚಿದ್ದಾರೆ. ಹಾಗೂ 25 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 24 ವಿಕೆಟ್ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications