ಇಲ್ಲಿ ನಿನ್ನ ಹೋರಾಟ ನಿನ್ನ ವಿರುದ್ಧವೇ ಎಂದು ಕೊಹ್ಲಿ ಟಾಂಗ್ ನೀಡಿದ್ದು ಯಾರಿಗೆ?

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಮಟ್ಟದಲ್ಲಿ ವಿವಾದಕ್ಕೀಡಾಗಿರುವ ಕ್ರಿಕೆಟಿಗ ಯಾರು ಎಂದರೆ ಎಲ್ಲರ ಬಾಯಿಯಲ್ಲಿಯೂ ಬರುವ ಏಕೈಕ ಹೆಸರು ವಿರಾಟ್ ಕೊಹ್ಲಿ. ಹೌದು, ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಕುರಿತು ನಡೆಯುತ್ತಿರುವ ಚರ್ಚೆಗಳು ಹಾಗೂ ವಿರಾಟ್ ಕೊಹ್ಲಿ ಸುತ್ತ ಹರಿದಾಡುತ್ತಿರುವಷ್ಟು ವಿವಾದಾತ್ಮಕ ವಿಷಯಗಳು ವಿಶ್ವದ ಯಾವುದೇ ಕ್ರಿಕೆಟಿಗನ ಕುರಿತಾಗಿಯೂ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ ಕ್ರಿಕೆಟಿಗನಾಗಿರುವ ವಿರಾಟ್ ಕೊಹ್ಲಿ ಈ ಹಿಂದೆ ಸಾಲು ಸಾಲು ಶತಕಗಳು ಹಾಗೂ ಅನೇಕ ಉತ್ತಮ ಪ್ರದರ್ಶನಗಳನ್ನು ನೀಡುವುದರ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ವಿರಾಟ್ ಕೊಹ್ಲಿ ಯಾವುದೇ ಶತಕ ಸಿಡಿಸದೇ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಇನ್ನು ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ವಿರಾಟ್ ಕೊಹ್ಲಿ ಕುರಿತಾಗಿ ಈ ರೀತಿಯ ಟೀಕೆಗಳು ಹಾಗೂ ವಿವಾದಗಳು ತುಸು ಹೆಚ್ಚಾದವು ಎಂದೇ ಹೇಳಬಹುದು. ಹೌದು, ಕಳೆದ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಮುನ್ನಡೆಸಿದ್ದ ಟೀಮ್ ಇಂಡಿಯಾ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು ಹಾಗೂ ನಂತರ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸಇಚ್ಛೆಯಿಂದ ತ್ಯಜಿಸಿದರು. ನಂತರದ ದಿನಗಳಲ್ಲಿ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ತೆಗೆದು ಹಾಕಿ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ತಂಡಗಳಿಗೂ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿತು.
ಹೀಗೆ ಸೀಮಿತ ಓವರ್ ತಂಡಗಳ ನಾಯಕತ್ವವನ್ನು ಕಳೆದುಕೊಂಡ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸೋತ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ಕೂಡ ರಾಜೀನಾಮೆಯನ್ನು ಸಲ್ಲಿಸಿದರು. ಹೀಗೆ ವಿರಾಟ್ ಕೊಹ್ಲಿ ನಾಯಕತ್ವವನ್ನು ಕಳೆದುಕೊಂಡಿದ್ದಕ್ಕೆ ಬಿಸಿಸಿಐ ಷಡ್ಯಂತ್ರವೇ ಕಾರಣ ಎಂಬ ಆರೋಪಗಳು ದೊಡ್ಡಮಟ್ಟದಲ್ಲಿಯೇ ವ್ಯಕ್ತವಾದವು. ಏಕದಿನ ತಂಡದ ನಾಯಕತ್ವ ಕಳೆದುಕೊಂಡ ನಂತರ ಬಿಸಿಸಿಐ ವಿರುದ್ಧವಾಗಿ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿಕೆಗಳನ್ನು ನೀಡಿ ಸದ್ದು ಮಾಡಿದ್ದ ಕೊಹ್ಲಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಉತ್ತೇಜನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಈ ಪೋಸ್ಟ್ ಮೂಲಕ ವಿಶೇಷವಾದ ಬರಹವನ್ನು ಬರೆದುಕೊಂಡಿರುವ ವಿರಾಟ್ ಕೊಹ್ಲಿ ತನ್ನ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದು ಈ ಕುರಿತಾಗಿ ಈ ಕೆಳಕಂಡ ಪ್ರತಿಕ್ರಿಯೆಗಳು ಹರಿದು ಬಂದಿವೆ.

ನಿನ್ನ ಹೋರಾಟ ನಿನ್ನ ವಿರುದ್ಧವೇ ಎಂದ ವಿರಾಟ್ ಕೊಹ್ಲಿ
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿರಾಟ್ ಕೊಹ್ಲಿ ತಾವು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನೇ ನೋಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದು ಇದಕ್ಕೆ 'ಇಟ್ಸ್ ಆಲ್‌ವೇಸ್ ಯು ವರ್ಸಸ್ ಯು' ಎಂದು ಬರೆದುಕೊಂಡಿದ್ದಾರೆ. ಹೀಗೆ ತಮ್ಮ ಚಿತ್ರಕ್ಕೆ ನಿನ್ನ ಹೋರಾಟ ನಿನ್ನ ವಿರುದ್ಧವೇ ಎಂದು ಬರೆದುಕೊಂಡಿರುವ ವಿರಾಟ್ ಕೊಹ್ಲಿ ತಮ್ಮಲ್ಲಿ ತಾವು ಆತ್ಮಸ್ಥೈರ್ಯವನ್ನು ತುಂಬಿಕೊಂಡಿದ್ದಾರೆ.

ಸೌರವ್ ಗಂಗೂಲಿ ಮತ್ತು ಬಿಸಿಸಿಐಗೆ ಟಾಂಗ್ ನೀಡಿದ್ರಾ ವಿರಾಟ್ ಕೊಹ್ಲಿ?
ಇನ್ನು ವಿರಾಟ್ ಕೊಹ್ಲಿ ಅವರ ಈ ಪೋಸ್ಟ್ ಕುರಿತಾಗಿ ಭಿನ್ನವಿಭಿನ್ನವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೆಲವರು ಇದನ್ನು ವಿರಾಟ್ ಕೊಹ್ಲಿ ರಾಯಭಾರಿಯಾಗಿರುವ ಪುಮಾ ಕಂಪೆನಿಯ ಜಾಹೀರಾತಿನ ಪೋಸ್ಟ್ ಎನ್ನುತ್ತಿದ್ದರೆ, ಇನ್ನೂ ಕೆಲವರು ವಿರಾಟ್ ಕೊಹ್ಲಿ ಈ ರೀತಿ ಬರೆದುಕೊಳ್ಳುವುದರ ಮೂಲಕ ತನಗೆ ಯಾರೂ ಕೂಡ ಸಾಟಿಯಿಲ್ಲ ನನ್ನ ಹೋರಾಟವೇನಿದ್ದರೂ ನನ್ನ ವಿರುದ್ಧವೇ ಎಂಬರ್ಥದಲ್ಲಿ ಸೌರವ್ ಗಂಗೂಲಿ ಮತ್ತು ಬಿಸಿಸಿಐ ಗೆ ಟಾಂಗ್ ನೀಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಮುಂದಿನ ಸರಣಿ ವೆಸ್ಟ್ ಇಂಡೀಸ್ ವಿರುದ್ಧ
ಇನ್ನು ಟೀಮ್ ಇಂಡಿಯಾ ತನ್ನ ಮುಂದಿನ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ತವರಿನಲ್ಲಿ ಎದುರಿಸಲಿದ್ದು ಫೆಬ್ರವರಿ 6ರಿಂದ ಆರಂಭವಾಗಲಿದೆ. ಈಗಾಗಲೇ ಬಿಸಿಸಿಐ ಈ ಸರಣಿಗೆ 18 ಆಟಗಾರರ ತಂಡವನ್ನು ಪ್ರಕಟಿಸಿದ್ದು ರೋಹಿತ್ ಶರ್ಮಾ ಮರಳಿ ತಂಡ ಸೇರಿದ್ದಾರೆ ಹಾಗೂ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications