
ಬೆಂಗಳೂರು, ಜನವರಿ 15: ವೆಸ್ಟ್ ಇಂಡೀಸ್‌ನ ಜಾಕ್ವೆಲಿನ್ ವಿಲಿಯಮ್ಸ್, ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಮಹಿಳಾ ಥರ್ಡ್ ಅಂಪೈರ್ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳುವ ಐರ್ಲೆಂಡ್ ತಂಡ ಅಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಮೊದಲ ಪಂದ್ಯಕ್ಕಾಗಿ ಮೈದಾನಕ್ಕಿಳಿಯಲಿರುವ ಜಾಕ್ವೆಲಿನ್ ಹೆಸರಿನಲ್ಲಿ ಅಪರೂಪದ ದಾಖಲೆ ನಿರ್ಮಾಣವಾಗಲಿದೆ.
ಬುಧವಾರ (ಜನವರಿ 15) ಆರಂಭಗೊಳ್ಳಲಿರುವ ಈ ಸರಣಿಯ ಆರಂಭಿಕ ಪಂದ್ಯದಿಂದ ಹಿಡಿದು ಸರಣಿಯುದ್ದಕ್ಕೂ ಜಾಕ್ವೆಲಿನ್ ವಿಲಿಯಮ್ಸ್ ಥರ್ಡ್ ಅಂಪೈರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. 43ರ ಹರೆಯದ ಜಾಕ್ವೆಲಿನ್ ಮೂಲತಃ ಜಮೈಕಾದವರು. ವಿಂಡೀಸ್ ಐರ್ಲೆಂಡ್ ಮೊದಲ ಟಿ20 ಗ್ರೆನೆಡಾದ ಸೇಂಟ್ ಜಾರ್ಜ್ಸ್‌ನಲ್ಲಿ ನಡೆಯಲಿದೆ.
'ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಿವಿ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಅವಕಾಶ ಲಭಿಸಿರುವುದು ರೋಮಾಂಚನ ನೀಡಿದೆ. ಇದು ನನ್ನ ಪಾಲಿಗೆ ಇದು ದೊಡ್ಡ ಗೌರವವಾಗಿ ಕಾಣಿಸಿದೆ,' ಎಂದು ಜಾಕ್ವೆಲಿನ್ ಐಸಿಸಿ ಹೇಳಿಕೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ.
2016ರಿಂದೀಚೆಗೆ ಐಸಿಸಿ ಪುರುಷರ ಟೂರ್ನಿಯಲ್ಲಿ ಥರ್ಡ್ ಅಂಪೈರ್ ಜವಾಬ್ದಾರಿ ನೀಡಲಾದ ಮೊದಲ ಮಹಿಳೆ ವಿಲಿಯಮ್ಸ್. 2016ರಲ್ಲಿ ಜೆರ್ಸಿಯಲ್ಲಿ ನಡೆದಿದ್ದ ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್ ಫೈವ್‌ನಲ್ಲಿ ಓಮನ್ ಮತ್ತು ನೈಜೀರಿಯಾ ಪಂದ್ಯದಲ್ಲಿ ಜಾಕ್ವೆಲಿನ್‌ಗೆ ಜವಾಬ್ದಾರಿ ವಹಿಸಲಾಗಿತ್ತು.