ನವದೆಹಲಿ: ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬಾರಿಸಿದ ಶತಕ ಹಾಗೂ ಮಧ್ಯಮ ಕ್ರಮಾಂಕದ ಸಾಯಿ ಸುದರ್ಶನ್ ಬಾರಿಸಿದ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಹಿಡಿತ ಸಾಧಿಸಿದೆ. ಟೀಮ್ ಇಂಡಿಯಾ ಮೊದಲಾದಿನದಾಟದ ಅಂತ್ಯದಲ್ಲಿ 2 ವಿಕೆಟ್ ನಷ್ಟಕ್ಕೆ 318 ರನ್ ಕಲೆ ಹಾಕಿದೆ.
ಆರು ಪಂದ್ಯಗಳ ಬಳಿಕ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್, ದೆಹಲಿಯಲ್ಲಿ ಟಾಸ್ ಗೆದ್ದರು. ಟಾಸ್ ಗೆಲ್ಲುತ್ತಿದ್ದಂತೆ ಗಿಲ್ ಮುಖದಲ್ಲಿ ಸಮಾಧಾನ. ಶುಭಮನ್ ಗಿಲ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯವನ್ನು ಮಾಡಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವದೇ ಬದಲಾವಣೆ ಇಲ್ಲದೆ ಅಂಗಳಕ್ಕೆ ಇಳಿದಿತ್ತು. ಟೀಮ್ ಇಂಡಿಯಾದ ಆರಂಭ ಉತ್ತಮವಾಗಿತ್ತು. ಅಹಮದಾಬಾದ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದ ಕೆಎಲ್ ರಾಹುಲ್ ಹಾಗೂ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಜೊಡಿ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ನೀಡಿತು. ಈ ವೇಳೆ ರಾಹುಲ್ 38 ರನ್ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

58 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಸಾಯಿ ಸುದರ್ಶನ್ ಉತ್ತಮ ಜೊತೆಯಾಟದ ಕಾಣಿಕೆ ನೀಡುವ ಸೂಚನೆ ನೀಡಿದರು. ಇವರು ಯಶಸ್ವಿ ಜೈಸ್ವಾಲ್ ಜೊತೆಗೂಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವ ಸೂಚನೆ ನೀಡಿದರು. ಅಲ್ಲದೆ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಸಾಯಿ ಬ್ಯಾಟ್ ಮಾಡಿದರು.
ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಜೋಡಿ 306 ಎಸೆತಗಳಲ್ಲಿ 193 ರನ್ ಜೊತೆಯಾಟದ ಕಾಣಿಕೆ ನೀಡಿತು. ಸಾಯಿ ಸುದರ್ಶನ್ 165 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 87 ರನ್ ಸಿಡಿಸಿ ಔಟ್ ಆದರು.

ಯಶಸ್ವಿ ಜೈಸ್ವಾಲ್ ಕಳೆದ ಕೆಲವು ಪಂದ್ಯಗಳಲ್ಲಿ ಮಂಕಾಗಿ ಕಂಡು ಬಂದಿದ್ದರು. ಆದರೆ ಶುಕ್ರವಾರ ಮಾತ್ರ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿದರು. ಅಲ್ಲದೆ ರನ್ ವೇಗಕ್ಕೆ ಭೋಜನ ವಿರಾಮದ ಬಳಿಕ ಚುರುಕು ಮುಟ್ಟಿಸಲು ಆರಂಭಿಸಿದರು. ಯಶಸ್ವಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 7ನೇ ಶತಕ ಬಾರಿಸಿದ ಸಾಧನೆಯನ್ನು ಮಾಡಿದರು. ದಿನದಾಟದ ಆಟದ ಅಂತ್ಯಕ್ಕೆ ಯಶಸ್ವಿ 22 ಬೌಂಡರಿಗಳ ನೆರವಿನಿಂದ ಅಜೇಯ 173 ರನ್ ಬಾರಿಸಿದ್ದಾರೆ. ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ (ಅಜೇಯ 20) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.