ಇಂಗ್ಲೆಂಡ್ ತಂಡದ ಮಾಜಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಕಳೆದ ತಿಂಗಳು ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಈ ವೇಳೆ ಇವರ ಅನುಭವಕ್ಕೆ ಯಾರು ಮಣೆ ಹಾಕಲಿಲ್ಲ. ಆದರೆ ಈಗ ಜೇಮ್ಸ್ ಆಂಡರ್ಸನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ತಮ್ಮ ಕನಸಿನ ತಂಡವನ್ನು ಪ್ರಕಟಿಸಿದ್ದಾರೆ. ಇವರ ಕನಸಿನ ತಂಡದಲ್ಲಿ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಆಯ್ಕೆ ಆಗಿದ್ದಾರೆ. ಇವರ ತಂಡದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇಂಗ್ಲೆಂಡ್ ತಂಡದ ಮಾಜಿ ವೇಗಿ ಜೇಮ್ಸ್ ಆಂಡರ್ಸನ್ ಕನಸಿನ ತಂಡದಲ್ಲಿ ಟೀಮ್ ಇಂಡಿಯಾದ ಹಾಗೂ ಇಂಗ್ಲೆಂಡ್ ತಂಡದ ನಾಲ್ವರು ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಆಸ್ಟ್ರೇಲಿಯಾದ ಇಬ್ಬರು, ದಕ್ಷಿಣ ಆಫ್ರಿಕಾದ ಒಬ್ಬರು ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಇವರ ತಂಡದಲ್ಲಿ ಏಕೈಕ ಆಲ್‌ರೌಂಢರ್‌ಗೆ ಅವಕಾಶ ನೀಡಲಾಗಿದೆ.

ಜೇಮ್ಸ್ ಆಂಡರ್ಸನ್ ಕನಸಿನ ತಂಡದಲ್ಲಿ ಅಲಿಸ್ಟಾರ್ ಕುಕ್ ಹಾಗೂ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರಿಗೆ ಸ್ಥಾನ ನೀಡಲಾಗಿದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದು, ಐದನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಸ್ಥಾನ ನೀಡಲಾಗಿದೆ.
ಆಂಡರ್ಸನ್ ಪ್ರಕಟಿಸಿದ ತಂಡದಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಏಕೈಕ ಆಲ್‌ರೌಂಡರ್ ರೂಪದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ವಿಕೆಟ್ ಕೀಪರ್ ರೂಪದಲ್ಲಿ ಭಾರತದ ಸ್ಟಾರ್ ಆಟಗಾರ ರಿಷಭ್ ಪಂತ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ವೇಗದ ಬೌಲರ್ ಆಗಿ ಸ್ಟುವರ್ಟ್ ಬ್ರಾಡ್, ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾತ್ ಮತ್ತು ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಸ್ಥಾನ ಪಡೆದಿದ್ದಾರೆ. ಇನ್ನು ಸ್ಪಿನ್ ಬೌಲರ್ ರೂಪದಲ್ಲಿ ಏಕೈಕ ಸ್ಪಿನ್ ಬೌಲರ್ ಕಾಣಿಸಿಕೊಂಡಿದ್ದಾರೆ.

ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ 700ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ವೇಗಿ ಎಂಬ ಹಿರಿಮೆಯನ್ನು ಹೊಂದಿದ್ದಾರೆ. ಇವರು ಆಡಿದ 188 ಟೆಸ್ಟ್ ಪಂದ್ಯಗಳಲ್ಲಿ 704 ವಿಕೆಟ್ ಕಬಳಿಸಿದ್ದಾರೆ. ಇನ್ನು 194 ಏಕದಿನ ಪಂದ್ಯಗಳಲ್ಲಿ 269 ವಿಕೆಟ್ ಪಡೆದು ಬೀಗಿದ್ದಾರೆ. ಅಲ್ಲದೆ ಹಿರಿಯ ವೇಗಿ ಟಿ20 ಕ್ರಿಕೆಟ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಆಡಿರುವ 19 ಟಿ20 ಪಂದ್ಯಗಳಲ್ಲಿ 18 ವಿಕೆಟ್ ಕಿತ್ತಿದ್ದಾರೆ.
ಜೇಮ್ಸ್ ಆಂಡರ್ಸನ್ ಕನಸಿನ ತಂಡ: ಅಲೆಸ್ಟೈರ್ ಕುಕ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಜೋ ರೂಟ್, ಸಚಿನ್ ತೆಂಡೂಲ್ಕರ್, ಆಂಡ್ರ್ಯೂ ಫ್ಲಿಂಟಾಫ್, ರಿಷಬ್ ಪಂತ್, ಶೇನ್ ವಾರ್ನ್, ಸ್ಟುವರ್ಟ್ ಬ್ರಾಡ್, ಗ್ಲೆನ್ ಮೆಕ್‌ಗ್ರಾತ್ ಮತ್ತು ಡೇಲ್ ಸ್ಟೇನ್.