ಕಾಂಟ್ರಾಕ್ಟ್ ಹಣ ನೀಡಿಲ್ಲ ಪಾಕಿಸ್ತಾನ್ ಸೂಪರ್ ಲೀಗ್: ಆಸಿಸ್ ಕ್ರಿಕೆಟಿಗನ ಗಂಭೀರ ಆರೋಪ; ಪಿಸಿಬಿ ಪ್ರತಿಕ್ರಿಯೆ

ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್ ಫಾಲ್ಕ್‌ನರ್ ಟೂರ್ನಿಯ ಆಯೋಜಕರ ಮೇಲೆ ಗಂಭೀರ ಆರೋಪವನ್ನು ಮಾಡಿದ್ದು ಮತ್ತೊಮ್ಮೆ ಪಾಕ್ ಕ್ರಿಕೆಟ್ ಮಂಡಳಿ ಕ್ರೀಡಾಲೋಕದಲ್ಲಿ ಮುಜುಗರಕ್ಕೀಡಾಗಿದೆ. ಒಪ್ಪಂದದ ಪ್ರಕಾರ ಹಣವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಅವರ ಫ್ರಾಂಚೈಸಿ ಕ್ವೆಟ್ಟಾ ಗ್ಲಾಡಿಯೇಟರ್ ನೀಡಿಲ್ಲ ಎಂಬ ಆರೋಪ ಮಾಡಿ ಟೂರ್ನಿಯಿಂದ ಹೊರನಡೆದಿದ್ದಾರೆ ಆಸಿಸ್ ಆಲ್‌ರೌಂಡರ್ ಫಾಲ್ಕ್‌ನರ್. ಆದರೆ ಈ ಆರೋಪವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಳ್ಳಿ ಹಾಕಿದ್ದು ಜೀವಮಾನದ ನಿಷೇಧವನ್ನು ಆಸಿಸ್ ಆಟಗಾರನ ಮೇಲೆ ಹೇರಿದೆ.
ಈ ಬೆಳವಣಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರೀ ಮುಜುಗರವನ್ನುಂಟು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಜೇಮ್ಸ್ ಫಾಲ್ಕ್‌ನರ್ ಮಾಡಿದ ಈ ಆರೋಪಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದು ಈ ಆರೋಪವನ್ನು ತಳ್ಳಿ ಹಾಕಿದೆ. ಅಲ್ಲದೆ ದುರ್ವರ್ತನೆ ತೋರಿದ ಕಾರಣಕ್ಕೆ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಜೇಮ್ಸ್ ಫಾಲ್ಕ್‌ನರ್ ಅವರಿಗೆ ಜೀವಮಾನದ ನಿಷೇಧ ಹೇರಿದೆ.

ಏನಿದು ಪ್ರಕರಣ?
ಸದ್ಯ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಫ್ರಾಂಚೈಸಿ ಪರವಾಗಿ ಆಡುತ್ತಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್ ಫಾಲ್ಕ್‌ನರ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿವಾದದ ಕೇಂದ್ರ ಬಿಂದುವಾದರು. ಎರಡು ಟ್ವೀಟ್ ಮಾಡಿರುವ ಜೇಮ್ಸ್ ಫಾಲ್ಕ್‌ನರ್ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಫ್ರಾಂಚೈಸಿ ಕ್ವೆಟ್ಟಾ ಗ್ಲಾಡಿಯೇಟರ್ ಒಪ್ಪಂದದ ಪ್ರಕಾರ ತನಗೆ ಸಂಭಾವನೆ ನೀಡದೆ ನಿರಂತರವಾಗಿ ಸುಳ್ಳು ಹೇಳುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ.

ಜೇಮ್ಸ್ ಫಾಲ್ಕ್‌ನರ್ ಮಾಡಿದ ಟ್ವೀಟ್‌ನಲ್ಲೇನಿದೆ?
"ನಾನು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ದುರದೃಷ್ಟವಶಾತ್ ನಾನು ಕಳೆದ 2 ಪಂದ್ಯಗಳಿಂದ ಹಿಂದೆ ಸರಿಯಬೇಕಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ನನ್ನ ಒಪ್ಪಂದದ ಒಪ್ಪಂದ ಹಾಗೂ ಪಾವತಿಗಳನ್ನು ಗೌರವಿಸದ ಕಾರಣ ಪಾಕಿಸ್ತಾನ ಸೂಪರ್ ಲೀಗ್‌ಅನ್ನು ತೊರೆಯಬೇಕಾಯಿತು. ನಾನು ಟೂರ್ನಿಯ ಸಂಪೂರ್ಣ ಅವಧಿಯಲ್ಲಿ ಇಲ್ಲಿದ್ದೇವೆ. ಆದರೆ ಅವರು ನನಗೆ ಸುಳ್ಳು ಹೇಳುವುದನ್ನು ಮುಂದುವರೆಸಿದ್ದಾರೆ" ಎಂದು ಮೊದಲ ಟ್ವಿಟ್‌ನಲ್ಲಿ ಜೇಮ್ಸ್ ಫಾಲ್ಕ್‌ನರ್ ಆರೋಪ ಮಾಡಿದ್ದಾರೆ.

"ಸಾಕಷ್ಟು ಅವಮಾನ ಎದುರಿಸಿದ್ದೇನೆ"
ಮತ್ತೊಂದು ಟ್ವೀಟ್‌ನಲ್ಲಿ ಮುಂದುವರಿದು ಫಾಲ್ಕ್‌ನರ್ "ಸಾಕಷ್ಟು ಯುವ ಪ್ರತಿಭೆಗಳು ಹಾಗೂ ಅದ್ಭುತವಾದ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಪಾಕಿಸ್ತಾನದಲ್ಲಿ ಕ್ರಿಕೆಟ್ ಮರಳಬೇಕೆಂದ ದೃಷ್ಟಿಯಿಂದ ನಾನು ಸಹಾಯಮಾಡಲು ಬಯಸಿದ್ದೆ, ಆದರೆ ಈಗ ಅದನ್ನು ತೊರೆಯಲು ನೋವುಂಟಾಗುತ್ತದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನ ಸೂಪರ್ ಲೀಗ್‌ನಿಂದ ನಾನು ಸಾಕಷ್ಟು ಅವಮಾನವನ್ನು ಅನುಭವಿಸಿದ್ದೇನೆ. ನೀವೆಲ್ಲಾ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಿರಿ ಎಂದು ಭಾವಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ ಫಾಲ್ಕ್‌ನರ್.

ಆರೋಪ ತಳ್ಳಿ ಹಾಕಿದ ಪಿಸಿಬಿ
ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಿರುದ್ಧ ಫಾಲ್ಕ್‌ನರ್ ಮಾಡಿರುವ ಆರೋಪವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಂಪೂರ್ಣವಾಗಿ ತಳ್ಳಿ ಹಾಕಿದ್ದು ಈ ಆರೋಪದಲ್ಲಿ ಹುರುಳಿಲ್ಲ ಎಂದಿದೆ. ಜೇಮ್ಸ್ ಫಾಲ್ಕ್‌ನರ್ ಸಹಿತ ಎಲ್ಲಾ ಆಟಗಾರರಿಗೂ 70ಶೇಕಡಾ ಸಂಭಾವನೆಯನ್ನು ಪಾವತಿ ಮಾಡಲಾಗಿದ್ದು ಫಾಲ್ಕ್‌ನರ್‌ಗೆ ಅವರ ಬ್ರಿಟಿಷ್ ಖಾತೆಗೆ ಕಳೆದ ಡಿಸೆಂಬರ್‌ನಲ್ಲಿಯೇ ಹಣವನ್ನು ವರ್ಗಾಯಿಸಲಾಗಿದೆ. ಉಳಿದ ಮೊತ್ತವನ್ನು ಪಿಎಸ್‌ಎಲ್ ಟೂರ್ನಿ ಮುಕ್ತಾಯವಾದ 40 ದಿನಗಳ ಒಳಗಾಗಿ ಎಲ್ಲಾ ಆಟಗಾರರಿಗೂ ಪಾವತಿಸಲಾಗುತ್ತದೆ" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ ಜಂಟಿ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಅಲ್ಲದೆ ಮಾತುಕತೆಯ ಸಂದರ್ಭದಲ್ಲಿ ದುರ್ವರ್ತನೆಯನ್ನು ತೋರಿಸುವ ಕಾರಣ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕೂಡ ಘೋಷಣೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications