ಜಸ್ಪ್ರೀತ್ ಬೂಮ್ರಾ ಸಂಪೂರ್ಣ ಫಿಟ್: ಈ ಸರಣಿ ಮೂಲಕ ಕಮ್‌ಬ್ಯಾಕ್ ಸಾಧ್ಯತೆ
ಸುದೀರ್ಘ ಕಾಲದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಇದೀಗ ಮತ್ತೆ ಟೀಮ್ ಇಂಡಿಯಾ ಪರ ಮೈದಾನಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ. ಪ್ರಸ್ತುತ ಬೆಂಗಳೂರಿನ ಎನ್‌ಸಿಎನಲ್ಲಿ ನೆಟ್ಸ್‌ನಲ್ಲಿ ಬೆವರಿಳಿಸುತ್ತಿರುವ ಜಸ್ಪ್ರೀತ್ ಬೂಮ್ರಾ ಮತ್ತೆ ಭಾರತದ ಕಣಕ್ಕಿಳಿಯಲು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ.
ಬೆಂಗಳೂರಿನ ಎನ್‌ಸಿಎನಲ್ಲಿ ಅಭ್ಯಾಸ ನಡೆಸುತ್ತಿರುವ ಬೂಮ್ರಾ ನಿತ್ಯವೂ 8-10 ಓವರ್‌ಗಳಷ್ಟು ಬೌಲಿಂಗ್ ನಡೆಸುತ್ತಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಮುಂಬರುವ ಐರ್ಲೆಂಡ್ ಪ್ರವಾಸದ ಮೂಲಕ ಕಮ್‌ಬ್ಯಾಕ್ ಮಾಡಲು ಈ ವೇಗಿ ಚಿತ್ತ ನೆಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಬೂಮ್ರಾ ಹಂಚಿಕೊಂಡಿದ್ದು ಕಮ್‌ಬ್ಯಾಕ್ ಸಿದ್ಧತೆಯ ಫೋಟೋಗಳನ್ನು ಈ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಪ್ರಸ್ತುತ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು ವಿಂಡೀಸ್ ನೆಲದಲ್ಲಿ ಮೂರು ಮಾದರಿಯಲ್ಲಿಯೂ ಸರಣಿಯನ್ನಾಡಲಿದೆ. ಎಲ್ಲಾ ಸರಣಿಗೂ ಈಗಾಗಲೇ ಟೀಮ್ ಇಂಡಿಯಾ ಬಳಗವನ್ನು ಘೋಷಣೆ ಮಾಡಲಾಗಿದೆ. ಈ ಸರಣಿಯ ಬಳಿಕ ಭಾರತ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಈ ಐರ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಬಳಗವನ್ನು ಇನ್ನಷ್ಟೇ ಆಯ್ಕೆ ಮಾಡಬೇಕಿದೆ. ಈ ಸರಣಿಗೆ ಜಸ್ಸಪ್ರೀತ್ ಬೂಮ್ರಾ ಅವರನ್ನು ಆಯ್ಕೆ ಮಾಡುವ ನಿರ್ಧಾರವನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಮಂಡಳಿ ತೆಗೆದುಕೊಳ್ಳಲಿದೆ.
ಬಹುತೇಕ ಒಂದು ವರ್ಷಗಳ ಕಾಲದಿಂದ ಭಾರತ ತಂಡದಿಂದ ಬೂಮ್ರಾ ದೂರವುಳಿದಿದ್ದು ಪ್ರಸ್ತುತ ಅವರ ರಿಹ್ಯಾಬ್ ಪ್ರಕ್ರಿಯೆ ಉತ್ತಮವಾಗಿ ನಡೆಯುತ್ತಿದೆ. ಆದರೆ ಕಳೆದ ವರ್ಷ ಬೂಮ್ರಾ ವಿಚಾರದಲ್ಲಿಯೇ ಆತುರಪಟ್ಟ ಕಾರಣದಿಂದಾಗಿ ಟಿ20 ವಿಶ್ವಕಪ್ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂಥಾ ಪ್ರಮುಖ ಟೂರ್ನಿಯಿಂದ ಬೂಮ್ರಾ ಹೊರಗುಳಿಯುವಂತಾಗಿತ್ತು. ಹೀಗಾಗಿ ಟೀಮ್ ಇಂಡಿಯಾ ಬೂಮ್ರಾ ಕಮ್‌ಬ್ಯಾಕ್ ವಿಚಾರದಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳದೆ ಅಗತ್ಯ ಸಮಯಾವಕಾಶವನ್ನು ನೀಡಿದ ಬಳಿಕವೇ ಕಮ್‌ಬ್ಯಾಕ್‌ಗೆ ನಿರ್ಧಾರ ಮಾಡುವ ಸಾಧ್ಯತೆಯಿದೆ.
ಕಳೆದ ಮಾರ್ಚ್‌ನಲ್ಲಿ ಜಸ್ಪ್ರೀತ್ ಬೂಮ್ರಾ ನ್ಯೂಜಿಲೆಂಡ್‌ನಲ್ಲಿ ಬೆನ್ನು ನೋವಿಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದಾದ ಬಳಿಕ ಎನ್‌ಸಿಎನಲ್ಲಿ ರಿಹ್ಯಾಬ್‌ನಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ದಿನಕ್ಕೆ 10 ಓವರ್‌ಗಳ ಬೌಲಿಂಗ್ ದಾಳಿ ನಡೆಸುತ್ತಿದ್ದು ಬಿಸಿಸಿಐ ಕೂಡ ಈ ವಿಚಾರವಾಗಿ ಸಂತಸದಲ್ಲಿದೆ.
ಮುಂದಿದೆ ಎರಡು ಮೆಗಾ ಟೂರ್ನಮೆಂಟ್‌ಗಳು
ಟೀಮ್ ಇಂಡಿಯಾ ಮುಂದೆ ಎರಡು ಮೆಗಾ ಟೂರ್ನಿಗಳು ಇದೆ. ಒಂದು ಏಷ್ಯಾ ಕಪ್ ಟೂರ್ನಿ ಹಾಗೂ ವಿಶ್ವಕಪ್. ಈ ಎರಡು ಟೂರ್ನಮೆಂಟ್‌ಗಳು ಕೂಡ ಏಷ್ಯಾದಲ್ಲಿಯೇ ನಡೆಯಲಿದೆ. ಏಷ್ಯಾ ಕಪ್ ಟೂರ್ನಿ ಶ್ರೀಲಂಕಾದಲ್ಲಿ ಆಯೋಜನೆಯಾದರೆ ವಿಶ್ವಕಪ್‌ನ ಆತಿಥ್ಯವನ್ನು ಭಾರತವೇ ವಹಿಸಿಕೊಂಡಿದೆ. ಹೀಗಾಗಿ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಯಶಸ್ಸು ಸಾಧಿಸಬೇಕಾದರೆ ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳುವುದು ಬಹಳ ಮುಖ್ಯವಾಗಿರಲಿದೆ. ಹೀಗಾಗಿ ಟೀಮ್ ಇಂಡಿಯಾದ ಈ ವೇಗಿಯ ಫಿಟ್‌ನೆಸ್ ಮೇಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications