ಮಿಯಾಂದಾದ್ ಹೊಡೆದ ಲಾಸ್ಟ್ ಬಾಲ್ ಸಿಕ್ಸ್, ವಿಲನ್ ಆದ ಚೇತನ್ ಶರ್ಮಾ
ನಾಳೆ ಸೂಪರ್ ಸಂಡೇ (ಜೂ 4). ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಸರಣಿಯ ಹೈವೋಲ್ಟೇಜ್ ಪಂದ್ಯ. ಭಾರತ ಮತ್ತು ಪಾಕಿಸ್ತಾನದ ನಡುವೆ ಎಜ್ ಬಾಸ್ಟನ್ ನಲ್ಲಿ ನಡೆಯಲಿರುವ ಈ ಏಕದಿನ ಪಂದ್ಯಕ್ಕೆ ಮುನ್ನ 31ವರ್ಷಗಳ ಹಿಂದಿನ ಪಂದ್ಯವೊಂದರ ಮೆಲುಕು.
ಏಪ್ರಿಲ್ 18, 1986, ಮೂವತ್ತೊಂದು ವರ್ಷಗಳ ಹಿಂದಿನ ಪಂದ್ಯ. ಶಾರ್ಜಾದಲ್ಲಿ ಆಸ್ಟ್ರೇಲಿಯಾ - ಏಷ್ಯಾ ಕ್ರಿಕೆಟ್ ಟೂರ್ನಮೆಂಟ್, ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಫೈನಲ್ ಪಂದ್ಯ.
ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ ಐವತ್ತು ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತ್ತು. ಆಗಿನ ವೇಳೆ ಅದೊಂದು ಸ್ಪರ್ಧಾತ್ಮಕ ಮೊತ್ತವಾಗಿತ್ತು. ಶ್ರೀಕಾಂತ್, ಗವಾಸ್ಕರ್, ವೆಂಗಸರ್ಕಾರ್ ಉತ್ತಮವಾಗಿ ಬ್ಯಾಟ್ ಮಾಡಿದ್ದರು.
ನೇರ ಪ್ರಸಾರಕ್ಕೆ ದೂರದರ್ಶನವನ್ನೇ ನಂಬಿಕೊಂಡಿದ್ದ ದಿನವದು. ಅಂತಿಮ ಎಸೆತದಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು ಬೇಕಾಗಿದ್ದದ್ದು ನಾಲ್ಕು ರನ್, ಕೊನೆಯ ಆಟಗಾರನ ಜೊತೆ ಕ್ರೀಸಿನಲ್ಲಿ ಇದ್ದದ್ದು ಕ್ರಿಕೆಟ್ ಕಂಡ ಅಪ್ರತಿಮ ಬ್ಯಾಟ್ಸಮ್ಯಾನ್ ಗಳಲ್ಲೊಬ್ಬರಾದ ಜಾವೇದ್ ಮಿಯಾಂದಾದ್.
ಕಪಿಲ್ ದೇವ್, ಮದನ್ ಲಾಲ್ ಮತ್ತು ಮಣೀಂದರ್ ಸಿಂಗ್ ತಮ್ಮ ಹತ್ತು ಓವರಿನ ಕೋಟಾ ಮುಗಿಸಿದ್ದರು. ನಾಯಕ ಕಪಿಲ್ ದೇವ್ ಗೆ ಇದ್ದ ಆಯ್ಕೆಯೆಂದರೆ ಒಂಬತ್ತು ಓವರ್ ಬೌಲ್ ಮಾಡಿದ್ದ ರವಿಶಾಸ್ತ್ರಿ ಅಥವಾ ಎಂಟು ಓವರ್ ಮುಗಿಸಿದ್ದ ಚೇತನ್ ಶರ್ಮಾ.
ಕಪಿಲ್, ಅಷ್ಟೇನೂ ಅನುಭವವಿಲ್ಲದ ಚೇತನ್ ಶರ್ಮಾ ಅವರಿಗೆ ಕೊನೆಯ ಓವರ್ ಎಸೆಯಲು ಸೂಚಿಸುವಾಗ, ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತ್ತು, ಅಂದರೆ ಕೊನೆಯ ಓವರ್ ನಲ್ಲಿ ಪಾಕಿಸ್ತಾನಕ್ಕೆ ಹದಿಮೂರು ರನ್ ಬೇಕಿತ್ತು. ಮುಂದೆ ಓದಿ..

ಮೊದಲ ಎಸೆತದಲ್ಲೇ ವಾಸೀಂ ಅಕ್ರಂ ರನೌಟ್
ಕೊನೆಯ ಓವರಿನ ಮೊದಲ ಎಸೆತದಲ್ಲಿ ವಾಸೀಂ ಅಕ್ರಂ ರನೌಟ್, ಎರಡನೇ ಎಸೆತದಲ್ಲಿ ಮಿಯಾಂದಾದ್ ಬೌಂಡರಿ ಬಾರಿಸಿದರೆ, ಮೂರನೇ ಬಾಲ್ ನಲ್ಲಿ ಒಂದು ರನ್, ನಾಲ್ಕನೇ ಎಸೆತದಲ್ಲಿ ಜುಲ್ಕರೇನ್ ಕ್ಲೀನ್ ಬೌಲ್ಡ್, ಐದನೇ ಎಸೆತದಲ್ಲಿ ಅಜರದ್ದೀನ್ ಕೃಪೆಯಿಂದ ರನೌಟ್ ಚಾನ್ಸ್ ನಿಂದ ಬಚಾವ್ ಆದ ಪಾಕಿಸ್ತಾನಕ್ಕೆ ಮತ್ತೊಂದು ರನ್.

ಕೊನೆಯ ಎಸೆತದಲ್ಲಿ ಪಾಕಿಗೆ ಬೇಕಾಗಿದ್ದದ್ದು ನಾಲ್ಕು ರನ್
ಕೊನೆಯ ಎಸೆತದಲ್ಲಿ ಪಾಕಿಸ್ತಾನಕ್ಕೆ ಬೇಕಾಗಿದ್ದದ್ದು ನಾಲ್ಕು ರನ್, ಬ್ಯಾಟ್ ಮಾಡುತ್ತಿದ್ದದ್ದು ಜಾವೇದ್ ಮಿಯಾಂದಾದ್, ನಾನ್ ಸ್ಟ್ರೈಕರ್ ನಲ್ಲಿ ತೌಸೀಫ್ ಅಹಮದ್. ಕೊನೆಯ ಎಸೆತ ಎದುರಿಸಲು ಸುಮಾರು ಹತ್ತು ನಿಮಿಷ ತೆಗೆದುಕೊಂಡ ಮಿಯಾಂದಾದ್, ಮಿಡ್ ವಿಕೆಟ್ ಕಡೆ ಸಿಕ್ಸ್ ಬಾರಿ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು.

ಅಭಿಮಾನಿಗಳಿಗೆ ಶಾಕ್
ಇನ್ಣೇನು ಪಂದ್ಯ ಗೆದ್ದೇ ಬಿಟ್ಟೆವು ಎನ್ನುವ ಭಾರತದ ಕೋಟ್ಯಾಂತರ ಅಭಿಮಾನಿಗಳಿಗೆ ಶಾಕ್, ಆ ಕೊನೆಯ ಒಂದೇ ಬಾಲ್ ನಲ್ಲಿ ಚೇತನ್ ಶರ್ಮಾ ಭಾರತದ ಕ್ರೀಡಾಭಿಮಾನಿಗಳ ಪಾಲಿಗೆ ವಿಲನ್ ಆದರು. ಫುಲ್ ಟಾಸ್ ಯಾಕೆ ಹಾಕಬೇಕಿತ್ತು, ಯಾರ್ಕರ್ ಹಾಕಬಹುದಿತ್ತಲ್ಲಾ ಅನ್ನೋ ಬಿಸಿಬಿಸಿ ಚರ್ಚೆ.

ಪಂದ್ಯ ಗೆಲ್ಲಿಸಿಕೊಟ್ಟ ಮಿಯಾಂದಾದ್
ಸೋಲುವ ಪಂದ್ಯವನ್ನು ಗೆದ್ದುಕೊಟ್ಟ ಜಾವೇದ್ ಮಿಯಾಂದಾದ್ ಗೆ ಅಂದಿನ ಪಾಕ್ ರಾಷ್ಟ್ರಪತಿ ಜಿಯಾ-ಉಲ್-ಹಕ್ ಅವರಿಂದ ಭರ್ಜರಿ ಬಹುಮಾನ ಸಿಕ್ಕರೆ, ಇತ್ತ ಚೇತನ್ ಶರ್ಮಾಗೆ ಎಲ್ಲರೂ ಉಗಿದಿದ್ದೇ ಉಗಿದಿದ್ದು. ಕ್ರಿಕೆಟ್ ಇತಿಹಾಸದಲ್ಲಿಅಚ್ಚಳಿಯದೇ ಉಳಿದ ಪಂದ್ಯ ಇದಾಗಿತ್ತು.

ನಾಳಿನ ಪಂದ್ಯಕ್ಕೆ ಭಾರತಕ್ಕೊಂದು ಆಲ್ ದಿ ಬೆಸ್ಟ್
ಭಾನುವಾರ, ಜೂನ್ ನಾಲ್ಕರಂದು ಮತ್ತೆ ಭಾರತ, ಪಾಕಿಸ್ತಾನವನ್ನು ಎದುರಿಸಲಿದೆ. ಇದೊಂದು ಕ್ರಿಕೆಟ್ ಪಂದ್ಯವಾದರೂ ಇದರಲ್ಲಿ ಎರಡು ದೇಶಗಳ ನಡುವಿನ ಭಾವನಾತ್ಮಕ ಸಂಬಂಧವಿದೆ. ಏನೇ ಆಗಲಿ, ನಮ್ಮ ತಂಡಕ್ಕೊಂದು ಆಲ್ ದಿ ಬೆಸ್ಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications