
ಹೈದರಾಬಾದ್, ಮೇ 12: ದಾಖಲೆಯ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದು ಬೀಗುವ ವಿಶ್ವಾಸದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ, ಪ್ರಸಕ್ತ ಐಪಿಎಲ್‌ನಲ್ಲಿ ಅದೇ ದಾಖಲೆ ಬರೆಯಲು ಎದುರು ನೋಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾನುವಾರ ಪೈಪೋಟಿ ನಡೆಸಲಿದೆ.
ಸಾಕಷ್ಟು ಏಳು ಬೀಳಿನ ನಡುವೆಯೂ ಈ ಬಾರಿ ಫೈನಲ್‌ಗೆ ಕಾಲಿಟ್ಟ ಮೊದಲ ತಂಡವಾಗಿರುವ ಮುಂಬೈ ಇಂಡಿಯನ್ಸ್‌ನ ಗೆಲುವಿನ ಮಂತ್ರ ಹಾಗೂ ಯಶಸ್ಸಿನ ಗುಟ್ಟೇನು ಎಂಬುದನ್ನು ಕೋಚ್ ಮಹೇಲಾ ಜಯವರ್ಧನೆ ಬಿಚ್ಚಿಟ್ಟಿದ್ದಾರೆ.
ಅಗತ್ಯದ ಸಂದರ್ಭಗಳಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವುದೇ ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿನ ಮಂತ್ರ ಎಂದು ಜಯವರ್ಧನೆ ಹೇಳಿದ್ದಾರೆ. "2018ರಲ್ಲಿ ಮಿಂಚಿದ್ದ ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅವರನ್ನು ಬದಿಗಿರಿಸಿ ಮತ್ತೊಬ್ಬ ಅನನುಭವಿ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಅವರನ್ನು ಆಡಿಸಿದ್ದು ತಂಡದ ದಿಟ್ಟ ನಿರ್ಧಾರಗಳಿಗೆ ಹಿಡಿದ ಕೈಗನ್ನಡಿ. ಇನ್ನು ಲಸಿತ್ ಮಾಲಿಂಗ ತಮ್ಮ ಶ್ರೇಷ್ಠ ಲಯದಲ್ಲಿ ಇಲ್ಲದಿದ್ದರೂ ಅವರನ್ನು ನೇರವಾಗಿ ಆಡುವ 11ರ ಬಳಗದಲ್ಲಿ ಆಡಿಸಿದ್ದು ತಂಡ ತೆಗೆದುಕೊಂಡ ದಿಟ್ಟ ನಿರ್ಧಾರಗಳಲ್ಲಿ ಒಂದು,'' ಎಂದು ಜಯವರ್ಧನೆ ಹೇಳಿದ್ದಾರೆ.
"ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಕಳೆದ ವರ್ಷ ಮಾರ್ಕಂಡೆ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ, ನನ್ನ ಪ್ರಕಾರ ರಾಹುಲ್ ಚಹರ್ ಈ ಬಾರಿ ಉತ್ತಮ ಲಯದಲ್ಲಿದ್ದರು. ಈ ವಿಚಾರದಲ್ಲಿ ನಾವು ಆಟಗಾರರೊಂದಿಗೆ ಮುಕ್ತವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ,'' ಎಂದಿದ್ದಾರೆ.
ಇನ್ನು ತಂಡದ ಪ್ರದರ್ಶನ ಮಟ್ಟ ಕಾಯ್ದುಕೊಳ್ಳಲು ಉತ್ತಮ ಹಾಗೂ ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತೀಯ ಆಟಗಾರರನ್ನು ಆಧರಿಸಿರಬೇಕು ಎಂದು ಜಯವರ್ಧನೆ ಹೇಳಿದ್ದಾರೆ.
"ಈ ರೀತಿಯ ಟೂರ್ನಿಗಳಲ್ಲಿ ಸಮರ್ಥ ಭಾರತೀಯ ಆಟಗಾರರ ಗುಂಪು ತಂಡದ ಮೂಲ ಶಕ್ತಿ ಆಗಬಲ್ಲರು. ಮುಂಬೈ ತಂಡ ಈ ರೀತಿಯ ಪ್ರತಿಭಾನ್ವಿರ ಮೇಲೆ ಹೂಡಿಕೆ ಮಾಡಿ ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸಿದೆ. ಕೇವಲ ಆಟಗಾರರ ತಂತ್ರಗಾರಿಕೆ ಮೇಲಷ್ಟೇ ಅಲ್ಲ, ಮಾನಸಿಕವಾಗಿಯೂ ಅವರು ಬಲಿಷ್ಠರಾಗುವಂತೆ ಮಾಡುತ್ತೇವೆ,'' ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಜಯವರ್ಧನೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಬಗ್ಗೆ ಮೆಚ್ಚುಗೆ
ಪ್ರಸಕ್ತ ಐಪಿಎಲ್‌ನಲ್ಲಿ ಮುಂಬೈ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದು, ಕೋಚ್ ಜಯವರ್ಧನೆ ಮೆಚ್ಚುಗೆಯ ಸುರಿಮಳೆ ಹರಿಸಿದ್ದಾರೆ. "ಮೂರು ವರ್ಷಗಳ ಹಿಂದೆ ಹಾರ್ದಿಕ್ ಕ್ರಿಕೆಟ್ ಜಗತ್ತಿನಲ್ಲಿಇನ್ನು ಅಂಬೆಗಾಲಿಡುತ್ತಿದ್ದರು. ಖಂಡಿತಾ ಅವರಲ್ಲಿ ಅಪಾರ ಪ್ರತಿಭೆಯಿತ್ತು. ಈಗ ಅತ್ಯಂತ ಪ್ರಗತಿ ಹೊಂದಿದ ಆಟಗಾರರಲ್ಲಿ ಪಾಂಡ್ಯ ಕೂಡ ಒಬ್ಬರು. ತಮ್ಮ ಮೇಲೆ ಹೆಚ್ಚು ಒತ್ತಡ ತಂದುಕೊಳ್ಳದಂತೆ ಪಾಂಡ್ಯಗೆ ಸಲಹೆ ನೀಡುತ್ತಿರುತ್ತವೇ. ಅವರ ಪರಿಶ್ರಮ ಅವರನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿದೆ,'' ಎಂದು ಜಯವರ್ಧನೆ ಹೇಳಿದ್ದಾರೆ.