ಇನ್ನೇನು ಕೆಲವೇ ದಿನಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್ ಆರಂಭಕ್ಕೂ ಮುನ್ನ ಡಬ್ಲ್ಯೂಪಿಎಲ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ 2026ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ತಂಡದ ನಾಯಕಿಯನ್ನು ಘೋಷಿಸಿದೆ. ಟೀಮ್ ಇಂಡಿಯಾದ ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ (jemimah Rodrigues) ಅವರನ್ನು ತಂಡದ ನಾಯಕಿಯನ್ನಾಗಿ ಘೋಷಣೆ ಮಾಡಿದೆ.
ಡಬ್ಲ್ಯೂಪಿಎಲ್ 2026 ಜನವರಿ 9 ರಂದು ಆರಂಭವಾಗಲಿದೆ. ಮುಂಬರುವ ಋತುವಿನಲ್ಲಿ ಡೆಲ್ಲಿ ತಂಡ ಜೆಮಿಮಾ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಈ ಮೊದಲು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಮೆಗ್ ಲ್ಯಾನಿಂಗ್ ಮುನ್ನಡೆಸಿದ್ದರು. ಈಗ ಈ ಸ್ಥಾನವನ್ನು ಜೆಮಿಮಾ ತುಂಬಿದ್ದಾರೆ. ಇವರು ಆರಂಭದಿಂದಲೂ ಇದೇ ತಂಡದ ಪರ ಆಡುತ್ತಿದ್ದು, ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಡಬ್ಲ್ಯೂಪಿಎಲ್‌ನಲ್ಲಿ 25 ವರ್ಷದ ಜೆಮಿಮಾ 27 ಪಂದ್ಯಗಳಲ್ಲಿ 507 ರನ್ ಗಳಿಸಿದ್ದಾರೆ. ಈ ವೇಳೆ 139.66 ಸ್ಟ್ರೈಕ್ ರೇಟ್‌ನಲ್ಲಿ ಹೊಂದಿದ್ದಾರೆ. ಇವರು ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಸೆಮಿಫೈನಲ್ ಹಂತದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸುವಲ್ಲಿ ಜೆಮಿಮಾ ದೊಡ್ಡ ಪಾತ್ರವನ್ನು ವಹಿಸಿದ್ದರು. ಇವರು ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದ್ದರು. ಇನ್ನು ಸದ್ಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಪಂದ್ಯದ ಮೊದಲ ಪಂದ್ಯದಲ್ಲಿ ಇವರು 69 ರನ್ ಗಳಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಆದರೆ ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದಿಲ್ಲ. ಆಡಿದ ಮೂರು ಆವೃತ್ತಿಗಳಲ್ಲಿ ತಂಡ ಫೈನಲ್‌ಗೆ ಕ್ವಾಲಿಫೈ ಆಗಿತ್ತು. ಮೆಗ್ ಲ್ಯಾನಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಹರಾಜಿಗೆ ಕೈ ಬಿಟ್ಟಿತ್ತು. ಆಗ ಯುಪಿ ವಾರಿಯರ್ಸ್ ತಂಡ ಇವರನ್ನು ಭಾರೀ ಮೊತ್ತ ನೀಡಿ ಖರೀದಿಸಿತು. ಇನ್ನು ಡೆಲ್ಲಿ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಆದರೂ ಸಹ ಮ್ಯಾನೇಜ್ಮೆಂಟ್ ಭಾರತೀಯ ಆಟಗಾರ್ತಿಗೆ ಮಣೆ ಹಾಕಿದೆ. ಜೆಮಿಮಾ ಈ ಹಿಂದೆ ಡಬ್ಲ್ಯೂಪಿಎಲ್‌ನಲ್ಲಾಗಲಿ ಅಥವಾ ಭಾರತ ತಂಡವನ್ನಾಗಲಿ ಮುನ್ನಡೆಸಿದ ಅನುಭವ ಹೊಂದಿಲ್ಲ. ಜೆಮಿಮಾ ಭಾರತ ತಂಡದ ಭರವಸೆಯ ಆಟಗಾರ್ತಿ ಇವರು ಈಗಾಗಲೇ ಭಾರತದ ಪರ 3 ಟೆಸ್ಟ್, 59 ಏಕದಿನ ಪಂದ್ಯ, 113 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಮೂಲಕ ಒಟ್ಟು 4428 ರನ್ ಕಲೆ ಹಾಕಿದ್ದಾರೆ.

ನಾಯಕತ್ವ ವಹಿಸಿಕೊಂಡ ಬಳಿಕ ಮಾತನಾಡಿದ ಜೇಮಿಮಾ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವುದು ಗೌರವದ ಸಂಗತಿ. ಈ ಜವಾಬ್ದಾರಿಯನ್ನು ನೀಡಿದ ಮಾಲೀಕರಿಗೆ ಧನ್ಯವಾದ. ವಿಶ್ವಕಪ್ ಗೆದ್ದ ಈ ವರ್ಷದಲ್ಲಿ ಆರಂಭದಿಂದಲೂ ಈ ತಂಡದ ಪರ ಆಡಿದ ನನಗೆ ತಂಡದ ನಾಯಕತ್ವ ಸಿಕ್ಕಿರುವುದು ದೊಡ್ಡ ಸೌಭಾಗ್ಯ. ಹಳೆಯ ನೆನಪುಗಳೊಂದಿಗೆ ಈ ತಂಡವನ್ನು ಮುನ್ನಡೆಸಿ, ತಂಡಕ್ಕೆ ಪ್ರಶಸ್ತಿಯ ಮುಕುಟವನ್ನು ತೊಡಿಸುವಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.