ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ 3ನೇ ಪಂದ್ಯಕ್ಕೆ ಸಜ್ಜಾಗಿದೆ. ರಾವಲ್ಪಿಂಡಿ ಮೈದಾನದಲ್ಲಿ 3ನೇ ಟೆಸ್ಟ್ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಟೆಸ್ಟ್ ಪಂದ್ಯದಲ್ಲಿ ಗೆಲ್ಲುವು ಸಾಧಿಸಿವೆ. ಹೀಗಾಗಿ ಮೂರನೇ ಹಾಗೂ ಕೊನೆಯ ಟೆಸ್ಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಇನಿಂಗ್ಸ್ ಹಾಗೂ 47 ರನ್‌ಗಳಿಂದ ಜಯ ಸಾಧಿಸಿತ್ತು. ಎರಡನೇ ಟೆಸ್ಟ್‌ನಲ್ಲಿ ಪಾಕ್ 152 ರನ್ ಗಳಿಂದ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಮತ್ತೊಮ್ಮೆ ಎಲ್ಲರ ಕಣ್ಣುಗಳು ಅಮೋಘ ಫಾರ್ಮ್‌ನಲ್ಲಿರುವ ಜೋ ರೂಟ್ ಮೇಲೆ ನೆಟ್ಟಿದೆ.

ಪ್ರಸಕ್ತ ವರ್ಷ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಜೋ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 13 ಟೆಸ್ಟ್ ಪಂದ್ಯಗಳ 23 ಇನ್ನಿಂಗ್ಸ್‌ಗಳಲ್ಲಿ 1300 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಮತ್ತು 4 ಅರ್ಧ ಶತಕ ಸೇರಿವೆ. ಇನ್ನು ಸ್ಥಿರ ಪ್ರದರ್ಶನ ನೀಡುತ್ತಿರುವ ರೂಟ್ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಸದ್ಯ ಟೆಸ್ಟ್ ಕ್ರಿಕೆಟ್ ಮಾತ್ರ ಆಡುತ್ತಿರುವ ಜೋ ರೂಟ್, ಪ್ರಸಕ್ತ ವರ್ಷ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ. ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಸಾಧಕರ ಪಟ್ಟಿಯಲ್ಲಿ ಇವರು ಮೂರನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳನ್ನು ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಕುಸಾಲ್ ಮೆಂಡಿಸ್ ಮೊದಲ ಸ್ಥಾನದಲ್ಲಿದ್ದಾರೆ. ಇವರು ಒಟ್ಟು 39 ಪಂದ್ಯಗಳನ್ನು ಆಡಿದ್ದು, 1419 ರನ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಮಿಂದು ಮೆಂಡಿಸ್ ಇದ್ದು ಇವರು 1321 ರನ್ ಕಲೆ ಹಾಕಿದ್ದಾರೆ. ಇವರ ಬಳಿಕ ನಂತರದ ಸ್ಥಾನದಲ್ಲಿ ರೂಟ್ ಇದ್ದಾರೆ.
ಜೋ ರೂಟ್ ಈ ಬಾರಿ ಅಂಗಳಕ್ಕೆ ಇಳಿಯುತ್ತಿದ್ದಂತೆ ದಾಖಲೆ ನಿರ್ಮಿಸುತ್ತಿದ್ದಾರೆ. ಗುರುವಾರ ಇವರು ಮೈದಾನದಲ್ಲಿ ಮತ್ತೊಂದು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ದಾಖಲೆಯನ್ನು ನಿರ್ಮಿಸಲು ರೂಟ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ನಡೆಯುವುದಿಲ್ಲ. ಬದಲಿಗೆ ಫೀಲ್ಡಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಬೇಕಿದೆ. ರೂಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆಯನ್ನು ರಚಿಸಲು ಕೇವಲ 3 ಹೆಜ್ಜೆ ದೂರದಲ್ಲಿದ್ದಾರೆ.

ಪಾಕಿಸ್ತಾನ ವಿರುದ್ಧ ಮೂರನೇ ಟೆಸ್ಟ್‌ನಲ್ಲಿ ರೂಟ್ 3 ಕ್ಯಾಚ್‌ಗಳನ್ನು ಪಡೆದಿದ್ದೇ ಆದಲ್ಲಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 100 ಕ್ಯಾಚ್‌ಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಸಹ ಇವರದ್ದಾಗಲಿದೆ. ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ಸ್ಟೀವನ್ ಸ್ಮಿತ್ ಇದ್ದು ಇವರು 87 ಕ್ಯಾಚ್ ಪಡೆದಿದ್ದಾರೆ.