ಐಸಿಸಿ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡ ಕಳಪೆ ಪ್ರದರ್ಶನ ನೀಡಿತ್ತು. ಪರಿಣಾಮ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಗುಂಪು ಹಂತದಲ್ಲಿ ಹೊರಗುಳಿಬೇಕಾಯಿತು. ನಂತರ ಜೋಸ್ ಬಟ್ಲರ್ ತಮ್ಮ ಏಕದಿನ ನಾಯಕತ್ವನ್ನು ತ್ಯಜಿಸಿದ್ದರು. ಅಂದಿನಿಂದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್ ಏಕದಿನ ತಂಡಕ್ಕೆ ಹೊಸ ನಾಯಕನ ಸ್ಥಾನಕ್ಕೆ ಜೋ ರೂಟ್ ಹೆಸರು ಚರ್ಚೆಗೆ ಬಂದಿದೆ.
ಇಸಿಬಿಯ ಕೆಲವು ಅಧಿಕಾರಿಗಳು ಜೋಸ ರೂಟ್ ಅವರನ್ನು ಇಂಗ್ಲೆಂಡ್ ತಂಡದ ನಾಯಕನಾಗಿ ಮಾಡಬಹುದು ಎಂದು ಹೇಳಿದ್ದಾರೆ. ಆದರೆ, ಇಸಿಬಿಯ ಈ ಬಿಗ್ ಆಫರ್ ಅನ್ನು ಜೋ ರೂಟ್ ತಿರಸ್ಕರಿಸಿದ್ದಾರೆ.

ಜೋಸ್ ಬಟ್ಲರ್ ಅವರಿಂದ ತೆರೆವಾಗಿರುವ ಇಂಗ್ಲೆಂಡ್ ಏಕದಿನ ತಂಡದ ನಾಯಕನ ಸ್ಥಾನಕ್ಕೆ ಜೋ ರೂಟ್ ಪ್ರಬಲ ಆಟಗಾರನಾಗಿದ್ದಾರೆ. ಆದರೆ, ವರದಿಗಳ ಪ್ರಕಾರ ಜೋ ರೂಟ್ ಸ್ವತಃ ನಾಯಕತ್ವ ರೇಸ್‌ನಿಂದ ಹೊರಗುಳಿದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ನಾಯಕನ ಪಾತ್ರವನ್ನು ವಹಿಸಿಕೊಳ್ಳುವುದಿಲ್ಲ ಎಂದು ರೂಟ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇಸಿಬಿ ನೀಡಿದ ಬಿಗ್ ಆಫರ್ ಅನ್ನು ರೂಟ್ ತಿರಸ್ಕರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಮಾತನಾಡಿರುವ ಜೋ ರೂಟ್, "ಆ ಹಡಗು ಮುಳುಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಇಂಗ್ಲೆಂಡ್ ಶರ್ಟ್‌ನಲ್ಲಿ ನಾಯಕನಾಗಿ ನನ್ನ ಸಮಯವನ್ನು ಮುಗಿಸಿದ್ದೇನೆ. ಆದಾಗ್ಯೂ, ನಾಯಕತ್ವದ ಅವಕಾಶ ಯಾರಿಗೆ ಸಿಕ್ಕರೂ ಅವರು ತುಂಬಾ ಹೆಮ್ಮೆಪಡುತ್ತಾರೆ. ಉತ್ತಮ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಜೋ ರೂಟ್ ಸೀಮಿತ ಓವರ್‍ಗಳ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಲ್ಲ. ಆದರೂ ಅವರು 2017 ರಿಂದ 2022 ರವರೆಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿದ್ದರು. ಟೆಸ್ಟ್ ಸರಣಿಗಳಲ್ಲಿ ನಿರಂತರವಾಗಿ ಅವರು ನಾಯಕತ್ವ ವಹಿಸಿದ್ದರೂ, ರೂಟ್ ಅವರನ್ನು ಸೀಮಿತ ಓವರ್‍ಗಳ ನಾಯಕನಾಗಿ ಎಂದಿಗೂ ನೋಡಿಲ್ಲ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಮಾಡಿದಾಗ ರೂಟ್ ಕೂಡ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು.
ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಜೋ ರೂಟ್ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಇದಾದ ಬಳಿಕ ರೂಟ್ ಚಾಂಪಿಯನ್ ಟ್ರೋಫಿಯಲ್ಲೂ ಭಾಗವಹಿಸಿದರು. ಕಳಪೆ ಪ್ರದರ್ಶನದಿಂದಾಗಿ ಇಂಗ್ಲೆಂಡ್ ಟೂರ್ನಿಯಿಂದ ಹೊರಗುಳಿದ ನಂತರ ಬಟ್ಲರ್ ತಮ್ಮ ನಾಯಕತ್ವದಿಂದ ಕೆಳಗಿಳಿದಿದ್ದರು.