ಐಪಿಎಲ್‌ನಲ್ಲಿ ಜಾನಿ ಬೈರ್‌ಸ್ಟೋವ್ ನೂತನ ದಾಖಲೆ

ಬೆಂಗಳೂರು, ಏಪ್ರಿಲ್ 22: ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್, ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ನೂತನ ದಾಖಲೆ ಬರೆದಿದ್ದಾರೆ. ಐಪಿಎಲ್‌ಗೆ ಪದಾರ್ಪಣೆ ಮಾಡಿದ ವರ್ಷದಲ್ಲಿ ಅತ್ಯಧಿಕ ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಬೈರ್‌ಸ್ಟೋವ್‌ಗೆ ದೊರೆತಿದೆ.
ಸನ್‌ರೈಸರ್ಸ್ ಹೈದರಾಬಾದ್ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ 29 ವರ್ಷದ ಅನುಭವಿ ಆಟಗಾರಬೈರ್‌ಸ್ಟೋವ್, ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ 9 ಪಂದ್ಯಗಳಿಂದ 63.57ರ ಸರಾಸರಿಯಲ್ಲಿಒಂದು ಶತಕ ಒಳಗೊಂಡಂತೆ ಒಟ್ಟು 445 ರನ್‌ಗಳನ್ನು ಚಚ್ಚಿದ್ದಾರೆ.
ಈ ಮೂಲಕ ಐಪಿಎಲ್‌ಗೆ ಪದಾರ್ಪಣೆ ವರ್ಷದಲ್ಲೇ ಅತ್ಯಧಿಕ ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಇದಕ್ಕೂ ಮುನ್ನ 2015ರಲ್ಲಿ ಶ್ರೇಯಸ್ ಅಯ್ಯರ್ ಡೆಲ್ಲಿ ಡೇರ್‌ಡೆವಿಲ್ಸ್ ಪರ 439 ರನ್‌ಗಳನ್ನು ಗಳಿಸಿ ಈ ದಾಖಲೆ ಹೊಂದಿದ್ದರು.

ಜತೆಯಾಟದಲ್ಲೂ ಎತ್ತಿದ ಕೈ
ಜಾನಿ ಬೈರ್‌ಸ್ಟೋವ್ ಜತೆಯಾಟದಲ್ಲೂ ಮತ್ತೊಂದು ದಾಖಲೆ ಬರೆದಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ವಾರ್ನರ್ 2019ರ ಐಪಿಎಲ್‌ನಲ್ಲಿ 733 ರನ್‌ಗಳನ್ನು ಜೋಡಿಸಿದ್ದಾರೆ. ಇದು ಮೊದಲ ವಿಕೆಟ್‌ಗೆ ಐಪಿಎಲ್‌ನ ಸೀಸನ್ ಒಂದರಲ್ಲಿ ದಾಖಲಾದ ದಾಖಲೆಯ ಜತೆಯಾಟದ ಮೊತ್ತವಾಗಿದೆ. ಇದಕ್ಕೂ ಮುನ್ನ 2016ರಲ್ಲಿ ಸನ್‌ರೈಸರ್ಸ್ ಪರ ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಒಗ್ಗೂಡಿಸಿದ್ದ 731 ರನ್‌ಗಳು ಮೊದಲ ವಿಕೆಟ್‌ಗೆ ಶ್ರೇಷ್ಠ ಜತೆಯಾಟದ ಮೊತ್ತವಾಗಿತ್ತು.

28ರ ಬಳಿಕ ಬೈರ್‌ಸ್ಟೋವ್ ಅಲಭ್ಯ
ಮುಂಬರುವ ಏಕದಿನ ಕ್ರಿಕೆಟ್ ವಿಶ್ವಕಪ್ ಸಲುವಾಗಿ ಪೂರ್ವಾಭಾವಿ ಸಿದ್ಧತೆಗೆ ಇಂಗ್ಲೆಂಡ್ ತಂಡ ಐರ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧೇಕದಿನ ಕ್ರಿಕೆಟ್ ಸರಣಿಗಳನ್ನಾಡಲಿದ್ದು, ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿ ತಂಡಗಳಲ್ಲಿ ಆಡುತ್ತಿರುವ ಇಂಗ್ಲೆಂಡ್ ಆಟಗಾರರು ಏಪ್ರಿಲ್ 28ರಂದು ತಾಯ್ನಾಡಿಗೆ ಹಿಂದಿರುಗಲಿದ್ದಾರೆ. ಬೈರ್‌ಸ್ಟೋವ್ ಮಂಗಳವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಇಂಗ್ಲೆಂಡ್‌ಗೆ ಹಿಂದಿರುಗಲಿದ್ದಾರೆ. ಇಂಗ್ಲೆಂಡ್ ತಂಡ ಐರ್ಲೆಂಡ್ ಎದುರು ಏಕೈಕ ಟಿ20 ಮತ್ತು ಪಾಕಿಸ್ತಾನ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಮತ್ತೊಂದು ಟಿ20 ಪಂದ್ಯವನ್ನಾಡಲಿದೆ.

ವಾರ್ನರ್ ಸೇವೆಯೂ ಇಲ್ಲ
ಪ್ರಸಕ್ತ ಐಪಿಎಲ್‌ನಲ್ಲಿ 9 ಪಂದ್ಯಗಳಿಂದ 517 ರನ್‌ಗಳನ್ನು ಚಚ್ಚಿ ಆರೆಂಜ್ ಕ್ಯಾಪ್ ಪಡೆದಿರುವ ಡೇವಿಡ್ ವಾರ್ನರ್, ಲೀಗ್‌ನ ಅಂತಿಮ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಪೂರ್ವ ಸಿದ್ಧತೆಯ ಶಿಬಿರದಲ್ಲಿ ಪಾಲ್ಗೊಳ್ಳಲು ತಾಯ್ನಾಡಿಗೆ ವಾರ್ನರ್ ಹಿಂದಿರುಗಲಿದ್ದಾರೆ. ಹೀಗಾಗಿ ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಮತ್ತು ಸನ್‌ರೈಸರ್ಸ್ ನಾಕ್‌ಔಟ್ ಹಂತ ಪ್ರವೇಶಿಸಿದರೆ ವಾರ್ನರ್ ಸೇವೆ ಇಲ್ಲದೆ ಇಲ್ಲದೆ ಹೋರಾಡ ಬೇಕಿದೆ.

ತುಂಬಲಾರದ ನಷ್ಟ: ವಿಲಿಯಮ್ಸನ್
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 131 ರನ್‌ಗಳ ಭರ್ಜರಿ ಜತೆಯಾಟ ನಡೆಸಿ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟ ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ವಾರ್ನರ್, ಲೀಗ್‌ನ ಅಂತಿಮ ಘಟ್ಟದ ಹೊತ್ತಿಗೆ ಅಲಭ್ಯರಾಗುವುದು ತಂಡಕ್ಕೆ ತುಂಬಲಾರದ ನಷ್ಟ ಎಂದು ಸನ್‌ರೈಸರ್ಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಭಿಪ್ರಾಯಪಟ್ಟಿದ್ದಾರೆ. "ಅವರಿಬ್ಬರ ಅಲಭ್ಯತೆ ಕಾಡಲಿದೆ. ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ತಂಡ ಸ್ಮರಿಸಲಿದೆ,'' ಎಂದು ವಿಲಿಯಮ್ಸನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications