Eng Vs Aus T20: ಈ ಆಲ್‌ರೌಂಡರ್ ಸೂಪರ್ ಸ್ಟಾರ್ ಎಂದು ಹೊಗಳಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್

ಇಂಗ್ಲೆಂಡ್‌ನ ಟಿ20 ಮತ್ತು ಏಕದಿನ ತಂಡದ ನಾಯಕ ಜೋಸ್ ಬಟ್ಲರ್, ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ತಂಡಕ್ಕೆ ವಾಪಸಾಗುತ್ತಿರುವ ಬಗ್ಗೆ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಬೆನ್‌ಸ್ಟೋಕ್ಸ್‌ರನ್ನು "ಸೂಪರ್ ಸ್ಟಾರ್" ಎಂದು ಅವರು ಕರೆದಿದ್ದಾರೆ.
ಮಾನಸಿಕ ಆರೋಗ್ಯದ ವಿರಾಮದ ಕಾರಣ 2021 ರ ಯುಎಇಯಲ್ಲಿ ನಡೆಯದ ಟಿ20 ವಿಶ್ವಕಪ್‌ನಲ್ಲಿ ಬೆನ್‌ಸ್ಟೋಕ್ಸ್ ಆಡಿರಲಿಲ್ಲ. ಆದರೆ, ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡಕ್ಕೆ ಮರಳಿದ್ದಾರೆ. ಸ್ಟೋಕ್ಸ್ ಪ್ರದರ್ಶನದ ಬಗ್ಗೆ ಇಂಗ್ಲೆಂಡ್ ತಂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.
ಟಿ20 ವಿಶ್ವಕಪ್‌ಗೆ ಮುನ್ನ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿ ಆಡಲಿದೆ. ಸರಣಿಯ ಮೊದಲನೇ ಪಂದ್ಯ ಅಕ್ಟೋಬರ್ 9ರಂದು ಪ್ರಾರಂಭವಾಗಲಿದ್ದು, ಮೈದಾನಕ್ಕಿಳಿಯಲು ಇಂಗ್ಲೆಂಡ್ ತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪಾಕಿಸ್ತಾನದ ವಿರುದ್ಧ 4-3 ಅಂತರದಲ್ಲಿ ಸರಣಿಯನ್ನು ಗೆದ್ದಿರುವ ಇಂಗ್ಲೆಂಡ್ ತಂಡ ಆತ್ಮವಿಶ್ವಾಸದಿಂದಲೇ ಆಸ್ಟ್ರೇಲಿಯಾಕ್ಕೆ ಆಗಮಿಸಿದೆ.
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಪಾಕಿಸ್ತಾನ ವಿರುದ್ಧದ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈಗ ಅನುಭವಿ ಮತ್ತು ಪ್ರಮುಖ ಆಟಗಾರರು ತಂಡಕ್ಕೆ ವಾಪಸಾಗಿದ್ದು, ತಂಡ ಹೆಚ್ಚು ಸಮತೋಲನದಿಂದ ಕೂಡಿದೆ.

ಆತನ ಉಪಸ್ಥಿತಿ ತಂಡಕ್ಕೆ ಬಲ ನೀಡುತ್ತದೆ
ಸರಣಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ, ನಾಯಕ ಜೋಸ್ ಬಟ್ಲರ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತಂಡಕ್ಕೆ ಆಗಮಿಸಿರುವುದರಿಂದ ತಂಡದ ಬಲ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಸ್ಟಾರ್ ಆಲ್‌ರೌಂಡರ್ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡುತ್ತಾರೆ ಎಂದು ನಾಯಕ ಬಟ್ಲರ್ ಹೇಳಿದ್ದಾರೆ.
"ಬೆನ್ ಸ್ಟೋಕ್ಸ್ ತಮ್ಮ ಪ್ರದರ್ಶನ ನೀಡಲು ಅವರಿಗೆ ಉತ್ತಮ ಅವಕಾಶವನ್ನು ಕಲ್ಪಿಸಲು ತಂಡ ಯಾವಾಗಲು ಸಿದ್ಧವಾಗಿದೆ. ಆತನನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡುತ್ತೇವೆ. ಆತನಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿ, ಆತನ ಆಟವನ್ನು ಮರಳಿ ಪಡೆಯಲು ಅವಕಾಶ ಮಾಡುತ್ತೇವೆ. ಆತ ಸೂಪರ್ ಸ್ಟಾರ್, ಅವನು ತಂಡದಲ್ಲಿರಬೇಕು ಎಂದು ನಾವು ಯಾವಾಗಲೂ ಬಯಸುತ್ತೇವೆ" ಎಂದು ಬಟ್ಲರ್ ಹೇಳಿದ್ದಾರೆ.
T20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಮತ್ತೊಂದು ಆಘಾತ, ದ.ಆಫ್ರಿಕಾ ಸರಣಿಯಿಂದ ದೀಪಕ್ ಚಹಾರ್ ಔಟ್

ಲಿಯಾಮ್ ಲಿವಿಂಗ್‌ಸ್ಟೋನ್ ಫಿಟ್ ಆಗುವ ಭರವಸೆ
ವಿಶ್ವಕಪ್ ಆರಂಭಕ್ಕೆ ಮುನ್ನ ಲಿಯಾಮ್ ಲಿವಿಂಗ್‌ಸ್ಟೋನ್‌ನ ಲಭ್ಯತೆ ಬಗ್ಗೆ ಮಾತನಾಡಿರುವ ಜೋಸ್ ಬಟ್ಲರ್, "ಲಿವಿಂಗ್‌ಸ್ಟೋನ್ ಈ ಕ್ಷಣದಲ್ಲಿ ಇನ್ನೂ ದೂರದಲ್ಲಿದ್ದಾರೆ. ಆದರೆ, ವಿಶ್ವಕಪ್ ಆರಂಭಕ್ಕೆ ಮುನ್ನ ಅವರು ಸಂಪೂರ್ಣವಾಗಿ ಫಿಟ್ ಆಗುತ್ತಾರೆ ಎಂದು ಭಾವಿಸುತ್ತೇವೆ" ಎಂದು ಹೇಳಿದರು.
ಲಿವಿಂಗ್‌ಸ್ಟೋನ್ ಇಂಗ್ಲೆಂಡ್ ಮತ್ತೊಬ್ಬ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ. ಅವರಿನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲದ ಕಾರಣ, ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ.

ಒಂದೂವರೆ ವರ್ಷದ ನಂತರ ತಂಡಕ್ಕೆ ಬಂದ ಸ್ಟೋಕ್ಸ್
ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಸರಣಿಯ ಆರಂಭಿಕ ಪಂದ್ಯ ಅಕ್ಟೋಬರ್ 9ರಂದು ನಡೆಯಲಿದೆ. 2021ರ ಮಾರ್ಚ್ ಬಳಿಕ ಇಂಗ್ಲೆಂಡ್ ಆಲ್‌ರೌಂಡರ್ ಆಡುತ್ತಿರುವ ಮೊದಲನೇ ಟಿ20 ಪಂದ್ಯವಾಗಿದೆ. 2019ರಲ್ಲಿ ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಬೆನ್‌ಸ್ಟೋಕ್ಸ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
2010ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ನಂತರ ಟಿ20 ವಿಶ್ವಕಪ್ ಗೆದ್ದಿಲ್ಲ. ಆದರೆ, ಈ ಬಾರಿ ಕಪ್ ಗೆಲ್ಲುವ ಬಲಿಷ್ಠ ತಂಡಗಳಲ್ಲಿ ಇಂಗ್ಲೆಂಡ್ ಕೂಡ ಒಂದಾಗಿದೆ. ಇಯಾನ್ ಮಾರ್ಗನ್ ನಾಯಕತ್ವದಲ್ಲಿ 2021ರ ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ತಂಡವಾಗಿದ್ದ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ನಿರಾಸೆ ಅನುಭವಿಸಿದ್ದರು.

ಒತ್ತಡ ಇಲ್ಲದೆ ಆಡುತ್ತೇವೆ ಎಂದ ನಾಯಕ
ಗಾಯದ ಕಾರಣ ಪಾಕಿಸ್ತಾನದಲ್ಲಿ ಟಿ20 ಸರಣಿಯಲ್ಲಿ ಕಣಕ್ಕಿಳಿಯದ ಜೋಸ್ ಬಟ್ಲರ್, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ನಾವು ಯಾವುದೇ ಒತ್ತಡವನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.
"ನಮ್ಮ ಮೇಲೆ ಯಾವುದೇ ಒತ್ತಡವಿದೆ ಎಂದು ಭಾವಿಸಬೇಡಿ. ಹೊಸ ತರಬೇತುದಾರ ಮತ್ತು ನಾಯಕನೊಂದಿಗೆ ತಂಡವು ಬದಲಾಗಿದೆ. ನಮ್ಮ ತಂಡದಲ್ಲಿ ಅದ್ಭುತ ಆಟಗಾರರು ಮತ್ತು ಕೆಲವು ಪಂದ್ಯವನ್ನು ಗೆಲ್ಲಿಸುವ ಆಟಗಾರರು ಮತ್ತು ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದ್ದೇವೆ. ನಾವು ಅಪಾಯಕಾರಿ ತಂಡ ಎಂದು ನಾನು ಭಾವಿಸುತ್ತೇನೆ ಆದರೆ ಒಂದು ಗುಂಪಿನಂತೆ ನಮ್ಮ ಮೇಲೆ ನಮಗೆ ದೊಡ್ಡ ನಿರೀಕ್ಷೆಗಳಿಲ್ಲ" ಎಂದು ಅವರು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications