* ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್ ನೀಡಿದ 115 ರನ್‌ಗಳ ಸುಲಭ ಸವಾಲನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕೆಲ ವಿಕೆಟ್‌ಗಳನ್ನು ಅಗ್ಗಕ್ಕೆ ಕಳೆದುಕೊಂಡರೂ ಸುಲಭವಾಗಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮುನ್ನಡೆ ಸಾಧಿಸಿದೆ.
* ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಸಪ್ರೀತ್ ಬೂಮ್ರಾ ವಿಚಾರವಾಗಿ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಗಾಯದಿಂದಾಗಿ ಸುದೀರ್ಘ ಕಾಲದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಜಸ್ಪ್ರೀತ್ ಬೂಮ್ರಾ ಪ್ರಸ್ತುತ ಸಂಪೂರ್ಣವಾಗಿ ಆಡಲು ಫಿಟ್ ಆಗಿದ್ದು ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವ ಸಾಧ್ಯತೆ ಇದೆ ಎಂದಿದ್ದಾರೆ.

* ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಬೇಕಿದ್ದ ಭಾರತದ ಸ್ಟಾರ್ ಬೌಲರ್ ಮೊಹ್ಮಮದ್ ಸಿರಾಜ್ ವಿಶ್ರಾಂತಿ ಪಡೆದು ತವರಿಗೆ ಮರಳಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಮುಗಿದ ನಂತರ ಭಾರತಕ್ಕೆ ವಾಪಸ್ಸಾದ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿ ಅವರೊಂದಿಗೆ ಮೊಹ್ಮಮದ್ ಸಿರಾಜ್ ಹಿಂತಿರುಗಿದ್ದಾರೆ.
* ಆಶಸ್ ಟೆಸ್ಟ್ ಸರಣಿಯ ಕೊನೆಯ ಹಾಗೂ ಐದನೇ ಟೆಸ್ಟ್ ಪಂದ್ಯ ಜುಲೈ 27ರಿಂದ ಆರಂಭವಾಗಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದಿದ್ದು ಆರಂಭದಲ್ಲಿ ಬೌಲಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಪ್ರವಾಸಿ ಇಂಗ್ಲೆಂಡ್ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ 283 ರನ್‌ಗಳಿಗೆ ಆಲೌಟ್ ಮಾಡಿದ್ದು ನಂತರ ಬ್ಯಾಟಿಂಗ್ ನಡೆಸಿದ್ದು ಮೊದಲ ದಿನದಾಟದ ಅಂತ್ಯದಲ್ಲಿ ಒಂದು ವಿಕೆಟ್ ಕಳೆದುಕೊಂಡು 61 ರನ್‌ಗಳನ್ನು ಗಳಿಸಿದೆ
* 2023ರ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ನವೀಕರಣಕ್ಕೆ ಒಳಗಾಗಲಿದ್ದು, ಇದಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಗಣನೀಯ ಆರ್ಥಿಕವಾಗಿ ಕೈಜೋಡಿಸಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರೀಡಾಂಗಣದ ನವೀಕರಣಕ್ಕಾಗಿ 50 ಕೋಟಿ ರೂಪಾಯಿಗಳನ್ನು ನೀಡಿದ್ದರೂ, ದೆಹಲಿ ಮೂಲದ ಐಪಿಎಲ್ ಫ್ರಾಂಚೈಸಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಧನಸಹಾಯ ನೀಡಲು ಮುಂದಾಗಿದೆ.
* 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಅರ್ಹತೆಯನ್ನು ಐರ್ಲೆಂಡ್ ತಂಡ ಸಂಪಾದಿಸಿದೆ. ಸ್ಕಾಟ್‌ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನ ಯುರೋಪಿಯಲ್ ರೀಜಿನಲ್ ಅರ್ಹತಾ ಸುತ್ತಿನಲ್ಲಿ ಜರ್ಮನಿ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾಗಿದೆ. ಇದು ಐರ್ಲೆಂಡ್ ತಂಡ ಅರ್ಹತೆ ಸಂಪಾದಿಸಲು ಸಾಕಾಗಿದೆ. ಜರ್ಮನಿ ವಿರುದ್ಧದ ಈ ಪಂದ್ಯ ಒಂದೂ ಎಸೆತ ಕಾರಣ ರದ್ದಾಯಿತು.
* ಈ ಬಾರಿಯ ವಿಶ್ವಕಪ್ ಭಾರತ ಆಯೋಜಿಸುತ್ತಿದ್ದು ಇಡೀ ಟೂರ್ನಿಯ ಬಗ್ಗೆ ಎಷ್ಟು ಚರ್ಚೆಗಳು ನಡೆಯುತ್ತಿದೆಯೋ ಅಷ್ಟೇ ಚರ್ಚೆ ಒಂದು ಪಂದ್ಯದ ಬಗ್ಗೆ ನಡೆಯುತ್ತಿದೆ. ಅದು ಭಾರತ vs ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ. ಸದ್ಯ ನವರಾತ್ರಿಯ ಆರಂಭದ ದಿನವೇ ಈ ಎರಡು ಪಂದ್ಯಗಳು ಮುಖಾಮುಖಿಯಾಗುತ್ತಿರುವ ಕಾರಣ ದಿನಾಂಕದಲ್ಲಿ ಬದಲಾವಣೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ಬೆಳವಣಿಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಈಗಾಗಲೇ ಹೋಟೆಲ್ ರೂಮ್‌ಗಳನ್ನು ಬುಕ್ ಮಾಡಿರುವ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.