PBKS vs GT: ಕನ್ನಡಿಗ ವೈಶಾಖ್‌ಗೆ 3 ವಿಕೆಟ್: ಪಂಜಾಬ್ ಶುಭಾರಂಭ
ನ್ಯೂ ಚಂಡಿಗಢ: ಯುವ ಆಟಗಾರ ಕೂಪರ್ ಕಾನೋಲಿ ಅವರು ಬಾರಿಸಿದ 72 ರನ್ ಹಾಗೂ ಕನ್ನಡಿಗ ವಿಜಯ್ ಕುಮಾರ್ ವೈಶಾಖ್ ಅವರ 3 ವಿಕೆಟ್‌ಗಳ ಬಲದಿಂದ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಶುಭಾರಂಭವನ್ನು ಮಾಡಿದೆ. ಗುಜರಾತ್ ಟೈಟಾನ್ಸ್ ಗೆಲುವಿನ ಖಾತೆ ಓಪನ್ ಮಾಡುವ ಕನಸು ಕಮರಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಗುಜರಾತ್ ತಂಡದ ಆರಂಭ ಸಾಧಾರಣವಾಗಿತ್ತು. ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸಾಯಿ ಸುದರ್ಶನ ಮೊದಲ ಪಂದ್ಯದಲ್ಲೇ ನಿರಾಸೆ ಅನುಭವಿಸಿದರು. ಇವರು 13 ರನ್ ಬಾರಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ಜೋಸ್ ಬಟ್ಲರ್ ಹಾಗೂ ಶುಭಮನ್ ಗಿಲ್ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿ 35 ಎಸೆತಗಳಲ್ಲಿ 46 ರನ್ ಸೇರಿಸಿತು. ಈ ವೇಳೆ ಶುಭಮನ್ ಗಿಲ್ ಅವರು 39 ರನ್ ಬಾರಿಸಿದ್ದಾಗ ಚಾಹಲ್ ಎಸೆತದಲ್ಲಿ ಔಟ್ ಆದರು.

ಮೂರನೇ ವಿಕೆಟ್‌ಗೆ ಜೋಸ್ ಬಟ್ಲರ್ ಜೊತೆಗೆ 36 ರನ್ ಜೊತೆಯಾಟವನ್ನು ನೀಡಿದ ಗ್ಲೇನ್ ಫಿಲಿಪ್ಸ್ (25) ಚಾಹಲ್ ಎಸೆತದಲ್ಲಿ ಔಟ್ ಅದರು. ಜೋಸ್ ಬಟ್ಲರ್ ಸಹ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಚಾಹಲ್ ಎಸೆತದಲ್ಲಿ ಔಟ್ ಆದರು. ವಾಷಿಂಗ್ಟನ್ ಸುಂದರ್ 18 ರನ್‌ಗಳಿಗೆ ಆಟ ಮುಗಿಸಿದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಗುಜರಾತ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್ ಸೇರಿಸಿತು.
ವೈಶಾಖ್‌ಗೆ 3 ವಿಕೆಟ್
ಪಂಜಾಬ್ ಪರ ಕನ್ನಡಿಗ ವಿಜಯ್ ಕುಮಾರ್ ವೈಶಾಖ್ 3 ವಿಕೆಟ್ ಪಡೆದರು. ಯುಜುವೇಂದ್ರ ಚಾಹಲ್ 2 ವಿಕೆಟ್ ಉರುಳಿಸಿದರು.
163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡದ ಆರಂಭ ಕಳಪೆಯಾಗಿತ್ತು. ಪ್ರಿಯಾಂಶ್ ಆರ್ಯ (7) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಎರಡನೇ ವಿಕೆಟ್‌ಗೆ ಪ್ರಭಸಿಮ್ರನ್ ಸಿಂಗ್ ಹಾಗೂ ಕೂಪರ್ ಕಾನೋಲಿ ಜೋಡಿ 49 ಎಸೆತಗಳಲ್ಲಿ 76 ರನ್ ಸೇರಿಸಿತು. ಈ ವೇಳೆ 1 ಬೌಂಡರಿ, 4 ಸಿಕ್ಸರ್ ಬಾರಿಸಿದ್ದ ಪ್ರಭಸಿಮ್ರನ್ ಸಿಂಗ್ 37 ರನ್ ಬಾರಿಸಿ ಔಟ್ ಆದರು. ಶ್ರೇಯಸ್ ಅಯ್ಯರ್ 18 ರನ್ ಬಾರಿಸಿದ್ದಾಗ ಕನ್ನಡಿಗ ಪ್ರಸಿದ್ಧ್ ಕೃಷ್ಣಾ ತೋಡಿದ ಖೆಡ್ಡಾಗೆ ಬಲಿಯಾದರು.
ಪಂಜಾಬ್ ಜಯದಲ್ಲಿ ಮಿಂಚಿದ ಯುವ ಬ್ಯಾಟರ್
ಪ್ರಸಿದ್ಧ್ ಕೃಷ್ಣ 2 ಓವರ್‌ಗಳಲ್ಲಿ 3 ವಿಕೆಟ್ ಪಡೆದು ಪಂಜಾಬ್ ತಂಡದ ಗೆಲುವಿನ ಆಸೆಗೆ ಪೆಟ್ಟು ನೀಡುವ ಪ್ರಯತ್ನ ಮಾಡಿದರು. ಆದರೆ ಇನ್ನೊಂದು ತುದಿಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಬ್ಯಾಟ್ ಮಾಡಿದ ಕೂಪರ್ ಕಾನೋಲಿ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು ಪದಾರ್ಪಣಾ ಐಪಿಎಲ್ ಪಂದ್ಯದಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 72 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಸಂದಿತು. ಪಂಜಾಬ್ 19.1 ಓವರ್‌ಗಳಲ್ಲಿ 7 ವಿಕೆಟ್‌ಗೆ 165 ರನ್ ಕಲೆ ಹಾಕಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications