
ಮೂರು ಪಂದ್ಯಗಳಲ್ಲಿ ಸತತವಾಗಿ ಡಕ್‌ಔಟ್ ಆಗುವ ಮೂಲಕ ಟೀಕೆಗೆ ಗುರಿಯಾಗಿರುವ ಸೂರ್ಯಕುಮಾರ್ ಯಾದವ್ ಬೆಂಬಲಕ್ಕೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಬಂದಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಡಕೌಟ್ ಆಗುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಹಲವರು ಭಾರತ ಏಕದಿನ ತಂಡದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ನೀಡಿರುವುದನ್ನು ಪ್ರಶ್ನೆ ಮಾಡಿದ್ದಾರೆ.
ಅತ್ಯುತ್ತಮ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್ ಬದಲಾಗಿ ಸೂರ್ಯಕುಮಾರ್ ಯಾದವ್‌ಗೆ ಆದ್ಯತೆ ನೀಡಿರುವುದಕ್ಕೆ ಹಲವರು ಟೀಕೆ ಕೂಡ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಪಿಲ್ ದೇವ್ ಇಬ್ಬರ ನಡುವೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಭಾರತ ತಂಡದಲ್ಲಿ ಸೂರ್ಯಕುಮಾರ್ ಯಾದವ್‌ರನ್ನು ಮುಂದುವರೆಸುವ ಆಡಳಿತ ಮಂಡಳಿಯ ನಿರ್ಧಾರ ಸರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬೆನ್ನಿನ ಗಾಯದ ಕಾರಣದಿಂದಾಗಿ ಶ್ರೇಯಸ್ ಅಯ್ಯರ್ ಭಾರತ ತಂಡದಿಂದ ಹೊರಗಳಿದ ನಂತರ ನಂಬರ್ 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಅವಕಾಶ ಪಡೆದರು. ಜನವರಿ 2023ರಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಗಾಯಗೊಂಡ ಸಂಜು ಸ್ಯಾಮ್ಸನ್ ನಂತರ ಸಂಪೂರ್ಣವಾಗಿ ಫಿಟ್ ಆದರೂ ಅವರನ್ನು ಬದಲೀ ಆಟಗಾರನ ಆಯ್ಕೆಗೆ ಬಿಸಿಸಿಐ ಪರಿಗಣಿಸಲಿಲ್ಲ.

ಉತ್ತಮ ಪ್ರದರ್ಶನ ನೀಡಿದವರಿಗೆ ಅವಕಾಶ ಸಿಗುತ್ತವೆ
ಸೂರ್ಯಕುಮಾರ್ ಯಾದವ್ ತಂಡದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ಸಾಕಷ್ಟು ಶ್ರಮಪಟ್ಟಿದ್ದಾರೆ ಎಂದು ಕಪಿಲ್ ದೇವ್ ಹೇಳಿದ್ದಾರೆ. "ಇಷ್ಟು ಉತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗನಿಗೆ ಹೆಚ್ಚಿನ ಅವಕಾಶಗಳು ಸಿಗುವುದು ಸಹಜ. ಸಂಜು ಸ್ಯಾಮ್ಸನ್ ಜೊತೆ ಸೂರ್ಯಕುಮಾರ್ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ, ಸಂಜು ಸ್ಯಾಮ್ಸನ್ ಕೆಟ್ಟ ಹಂತವನ್ನು ದಾಟಿದರೆ, ಬೇರೆಯವರ ಬಗ್ಗೆ ಮಾತನಾಡಲು ಆರಂಭಿಸುತ್ತೀರಾ" ಎಂದು ಹೇಳಿದರು.
"ಭಾರತ ತಂಡದ ಆಡಳಿತವು ಸೂರ್ಯಕುಮಾರ್ ಯಾದವ್‌ಗೆ ಹೆಚ್ಚಿನ ಬೆಂಬಲ ನೀಡಲು ಯೋಜಿಸಿದರೆ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು. ಜನರು ಮಾತನಾಡುವುದು ಸಹಜ, ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ, ಇದು ಮ್ಯಾನೇಜ್‌ಮೆಂಟ್ ನಿರ್ಧಾರವೇ ಅಂತಿಮ" ಎಂದು ಕಪಿಲ್ ದೇವ್ ಹೇಳಿದರು. ಸೂರ್ಯಕುಮಾರ್ ಯಾದವ್ 2023 ರಲ್ಲಿ ಆರು ಏಕದಿನ ಇನ್ನಿಂಗ್ಸ್‌ಗಳಲ್ಲಿ 8.17 ಸರಾಸರಿ ಮತ್ತು 116.67 ಸ್ಟ್ರೈಕ್ ರೇಟ್‌ನಲ್ಲಿ 49 ರನ್ ಗಳಿಸಿದ್ದಾರೆ.

ಫಿನಿಶರ್ ಆಗಿ ಆಡಿಸುವ ನಿರ್ಧಾರ ಇರಬಹುದು
ಭಾರತ ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಯಿತು. ಕೆಎಲ್ ರಾಹುಲ್ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದರು. ಎಡಗೈ ಬ್ಯಾಟರ್ ಅಕ್ಷರ್ ಪಟೇಲ್‌ಗೆ 5ನೇ ಕ್ರಮಾಂಕದಲ್ಲಿ ಬಡ್ತಿ ನೀಡಲಾಯಿತು.
ಆಷ್ಟನ್ ಅಗರ್ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಮುಂದಿನ ಎಸೆತದಲ್ಲೇ ಸೂರ್ಯಕುಮಾರ್ ಯಾದವ್ ಬೌಲ್ಡ್ ಆಗುವ ಮೂಲಕ ಭಾರತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಸೋಲನುಭವಿಸುವ ಮೂಲಕ ಸರಣಿಯನ್ನು ಕಳೆದುಕೊಂಡಿತು. 4 ವರ್ಷಗಳ ಬಳಿಕ ಭಾರತ ತವರಿನಲ್ಲಿ ಏಕದಿನ ಸರಣಿಯನ್ನು ಸೋತಿತು.
ಸೂರ್ಯಕುಮಾರ್ ಯಾದವ್‌ರನ್ನು 7ನೇ ಕ್ರಮಾಂಕದಲ್ಲಿ ಆಡಿಸುವ ನಿರ್ಧಾರದ ಹಿಂದೆ ಅವರಿಗೆ ಫಿನಿಶರ್ ಪಾತ್ರವನ್ನು ನೀಡುವ ಯೋಜನೆ ಇರಬಹುದು ಎಂದು ಕಪಿಲ್ ದೇವ್ ಹೇಳಿದ್ದಾರೆ. "ಪಂದ್ಯ ಮುಗಿದ ನಂತರ ಮಾತನಾಡುವುದು ತುಂಬಾ ಸುಲಭ. ಬಹುಶಃ ಸೂರ್ಯಕುಮಾರ್ ಅವರನ್ನು ನಂ.7ಕ್ಕೆ ಕಳುಹಿಸುವ ಹಿಂದಿನ ಆಲೋಚನೆ ಅವರಿಗೆ ಫಿನಿಶರ್ ಆಗಿ ಅವಕಾಶ ನೀಡುವುದಾಗಿದೆ. ಏಕದಿನ ಪಂದ್ಯಗಳಲ್ಲಿ ಇದು ಹೊಸದೇನಲ್ಲ, ಹಲವು ಬಾರಿ ನಡೆದಿದೆ, ಕೆಲವೊಮ್ಮೆ ಇದರಿಂದ ಬ್ಯಾಟರ್ ಗಳ ಆತ್ಮವಿಶ್ವಾಸ ಕುಸಿಯಬಹುದು, ಕೋಚ್ ಮತ್ತು ನಾಯಕ ನಿರ್ದಿಷ್ಟವಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡಿರಬೇಕು" ಎಂದು ಹೇಳಿದ್ದಾರೆ.