Kar vs Goa : ಮನೀಶ್ ಪಾಂಡೆ ಭರ್ಜರಿ ದ್ವಿಶತಕ, ಗೋವಾ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಕರ್ನಾಟಕ

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಗೋವಾ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಗೋವಾ ಎರಡನೇ ದಿನದಾಟದ ಅಂತ್ಯಕ್ಕೆ 45 ರನ್ ಗಳಿಸಿದ್ದು 1 ವಿಕೆಟ್ ಕಳೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಉತ್ತಮ ಆರಂಭ ಪಡೆಯಿತು. ರವಿಕುಮಾರ್ ಸಮರ್ಥ್ ಮತ್ತು ಮಯಾಂಕ್ ಅಗರ್ವಾಲ್ ಮೊದಲನೇ ವಿಕೆಟ್‌ಗೆ 116 ರನ್ ಕಲೆಹಾಕಿದರು. ನಾಯಕ ಮಯಾಂಕ್ ಅಗರ್ವಾಲ್ 50 ರನ್ ಗಳಿಸಿ ಔಟಾದರು.
ನಂತರ ಬಂದ ವಿಶಾಲ್ ಓನತ್ 91 ರನ್ ಗಳಿಸಿದರು. 3ನೇ ವಿಕೆಟ್‌ಗೆ ರವಿಕುಮಾರ್ ಸಮರ್ಥ್ ಮತ್ತು ವಿಶಾಲ್ 145 ರನ್‌ಗಳ ಜೊತೆಯಾಟ ಆಡಿದರು. ನಿಖಿಲ್ ಜೋಸ್ ಮಾತ್ರ 9 ರನ್ ಗಳಿಸಿ ಔಟಾದರು. ರವಿಕುಮಾರ್ ಸಮರ್ಥ್ 140 ರನ್ ಗಳಿಸಿದರು. ಉತ್ತಮ ಫಾರ್ಮ್‌ನಲ್ಲಿರುವ ರವಿಕುಮಾರ್ ಸಮರ್ಥ್ ಟೂರ್ನಿಯ ಎರಡನೇ ಶತಕ ಗಳಿಸಿದರು.

ಮನೀಶ್ ಪಾಂಡೆ ಭರ್ಜರಿ ದ್ವಿಶತಕ
ಐಪಿಎಲ್ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿರುವ ಮನೀಶ್ ಪಾಂಡೆ, ರಣಜಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 186 ಎಸೆತಗಳಲ್ಲಿ 14 ಬೌಂಡರಿ, 11 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 208 ರನ್ ಗಳಿಸಿ ಮಿಂಚಿದರು. ಎರಡನೇ ದಿನದಲ್ಲಿ ಗೋವಾ ಬೌಲರ್ ಗಳ ಬೆವರಿಳಿಸಿದ ಪಾಂಡೆ ಟೆಸ್ಟ್ ಕ್ರಿಕೆಟ್‌ನಲ್ಲಿ ಟಿ20 ಇನ್ನಿಂಗ್ಸ್ ಆಡಿದರು.
ಶರತ್ ಬಿಆರ್ 29 ರನ್ ಗಳಿಸಿದರೆ, ಕೃಷ್ಣಪ್ಪ ಗೌತಮ್ 16 ರನ್ ಗಳಿಸಿದರು, ಶುಭಾಂಗ್ ಹೆಗಡೆ 39 ರನ್ ಗಳಿಸಿ ಔಟಾದರು. ಗೋವಾ ತಂಡದ ಪರವಾಗಿ ನಾಯಕ ದರ್ಶನ್ ಮಿಸಲ್ 3 ವಿಕೆಟ್ ಪಡೆದರು. ಅರ್ಜುನ್ ತೆಂಡೂಲ್ಕರ್ 2 ವಿಕೆಟ್ ಪಡೆದರೆ, ಲಕ್ಷ್ಯ ಗಾರ್ಗ್ ಮತ್ತು ಎಸ್ ಲ್ಯಾಡ್ ತಲಾ ಒಂದು ವಿಕೆಟ್ ಪಡೆದರು.
ಮೂರನೇ ಸ್ಥಾನದಲ್ಲಿದೆ ಕರ್ನಾಟಕ
ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಗೋವಾ 2ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ, ಅಮೋಘ್ ಸುನಿಲ್ ದೇಸಾಯಿ 5 ರನ್ ಗಳಿಸಿ ರೋನಿತ್ ಮೋರೆಗೆ ವಿಕೆಟ್ ಒಪ್ಪಿಸಿದರು. ಸುಮಿರನ್ ಅಮೋನ್‌ಕರ್ ಅಜೇಯ 30 ಮತ್ತು ಸುಯಾಶ್ ಪ್ರಭುದೇಸಾಯಿ ಅಜೇಯ 6 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.
ರಣಜಿ ಪಂದ್ಯಾವಳಿಯಲ್ಲಿ ಸಿ ಗುಂಪಿನಲ್ಲಿರುವ ಕರ್ನಾಟಕ ಇದುವರೆಗೂ 2 ಟೆಸ್ಟ್ ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಪಂದ್ಯದಲ್ಲಿ ಡ್ರಾ ಮಾಡಿಕೊಳ್ಳುವ ಮೂಲಕ 10 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications