

ಬೆಂಗಳೂರು, ಜುಲೈ 30: ಐಪಿಎಲ್ ನಂತರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯಲಿರುವ ಕರ್ನಾಟಕ ಪ್ರೀಮಿಯರ್ ಲೀಗ್ 7ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 15ರಿಂದ ಆರಂಭಗೊಳ್ಳಲಿರುವ ಈ ಕರುನಾಡ ಕ್ರಿಕೆಟ್ ಹಬ್ಬದ ಸಂಪೂರ್ಣ ವೇಳಾಪಟ್ಟಿಯನ್ನು ಕೆಎಸ್ಸಿಎ ಇಂದು (ಜು.30) ಬಿಡುಗಡೆಯಾಗಿದೆ.
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಸಹಯೋಗದಲ್ಲಿ ನಡೆಯುವ ಈ 'ಕಾರ್ಬನ್ ಸ್ಮಾರ್ಟ್ ಫೋನ್ಸ್ ಕೆಪಿಎಲ್ 2018'ರಲ್ಲಿ ಬಿಜಾಪುರ್ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರ್ ವಾರಿಯರ್ಸ್, ನಮ್ಮ ಶಿವಮೊಗ್ಗ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಸೆಣಸಾಡಲಿವೆ. ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರ ಮಾಡಲಿದೆ.
ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಪಂದ್ಯಗಳು ನಡೆಯಲಿದ್ದು, ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಆಗಸ್ಟ್ 15ರಂದು ನಡೆಯುವ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ.
ಮಾಜಿ ಕೆಎಸ್ಸಿಎ ಅಧ್ಯಕ್ಷರಾಗಿದ್ದ (ದಿವಂಗತ) ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಗೌರವಾರ್ಥವಾಗಿ ಪ್ರಶಸ್ತಿ ಪಂದ್ಯ ಮೈಸೂರಿನಲ್ಲಿ ನಡೆಯಲಿದೆ. ಪಂದ್ಯಾಟದ ಯಶಸ್ವಿ ನೆಲೆಯಲ್ಲಿ ಕೆಎಸ್ಸಿಎ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಟೂರ್ನಿಯಲ್ಲಿ ಭ್ರಷ್ಟಾಚಾರ ಇಣುಕದಂತೆ ಕೆಪಿಎಲ್ ಭ್ರಷ್ಟಾಚಾರ ನಿಗ್ರಹ ಸಮಿತಿ ರಚಿದೆ. ಹೀಗಾಗಿ ಈ ಬಾರಿಯ ಕೆಪಿಎಲ್ ಕ್ರೀಡಾಭಿಮಾನಿಗಳನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವುದರಲ್ಲಿ ಅನುಮಾನವಿಲ್ಲ.
