ಭಾರತ ತಂಡಕ್ಕಾಗಿ ಆಡಲು ನನಗೆ ಮತ್ತೊಂದು ಅವಕಾಶ ಬೇಕು ಎಂದ ಕನ್ನಡಿಗ

ಬಾಂಗ್ಲಾದೇಶದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಹಲವು ದಾಖಲೆಗಳನ್ನು ಬರೆದರು. ಇದರ ಬೆನ್ನಲ್ಲೇ ಕನ್ನಡಿಗ ಕರುಣ್ ನಾಯರ್ ಟ್ವೀಟ್ ಮಾಡಿದ್ದು, ಭಾರತ ತಂಡದಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ.
ಛತ್ತೋಗ್ರಾಮ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಹೆಬ್ಬೆರಳಿನ ಗಾಯದಿಂದಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ಕಿಶನ್ 131 ಎಸೆತಗಳಲ್ಲಿ 210 ರನ್ ಗಳಿಸಿದರು. ಅವರು 126 ಎಸೆತಗಳಲ್ಲಿ 200 ರನ್ ಗಳಿಸಿದರು. ಕ್ರಿಸ್ ಗೇಲ್ ದಾಖಲೆಯನ್ನು ಅವರು ಹಿಂದಿಕ್ಕಿದರು.
ಹಲವಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಸಂದರ್ಭದಲ್ಲಿ ಕರುಣ್ ನಾಯರ್ ಅವರನ್ನು ನೆನಪಿಸಿಕೊಂಡರು. 31 ವರ್ಷ ವಯಸ್ಸಿನ ಕರುಣ್ ನಾಯರ್ 2016ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ್ದರು. ಭಾರತದ ಪರವಾಗಿ ತ್ರಿಶತಕ ಸಿಡಿಸಿದ ಎರಡನೇ ಬ್ಯಾಟರ್ ಕರುಣ್ ನಾಯರ್, 2016ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು.
ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಅವರು ಭಾರತ ತಂಡಕ್ಕಾಗಿ ಆಡಲು ಹೆಚ್ಚಿನ ಅವಕಾಶಗಳನ್ನು ಪಡೆಯಲಿಲ್ಲ. ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಕೇವಲ ಆರು ಟೆಸ್ಟ್ ಮತ್ತು ಎರಡು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ಮತ್ತೊಂದು ಅವಕಾಶ ಕೊಡಿ ಎಂದ ಕರುಣ್ ನಾಯರ್
ಶನಿವಾರ ಟ್ವೀಟ್ ಮಾಡಿರುವ ಕರುಣ್ ನಾಯರ್, "ಡಿಯರ್ ಕ್ರಿಕೆಟ್, ನನಗೆ ಮತ್ತೊಂದು ಅವಕಾಶ ನೀಡು" ಎಂದು ಮನವಿ ಮಾಡಿದ್ದಾರೆ.
ಭಾರತ ತಂಡಕ್ಕೆ ಅವರು ಮತ್ತೆ ಆಯ್ಕೆಯಾಗದ ಬಗ್ಗೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕರುಣ್ ನಾಯರ್ ತಮಗೆ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ್ದರಿಂದ ಅವರಿಗೆ ಮತ್ತೆ ಅವಕಾಶ ಸಿಗಲಿಲ್ಲ ಎಂದರೆ ಮತ್ತೆ ಕೆಲವರು ಅವರು ಕೆಲವೇ ಪಂದ್ಯಗಳನ್ನು ಆಡಿದರು, ಹೆಚ್ಚಿನ ಅವಕಾಶ ಸಿಗದಿರುವುದು ದುರದೃಷ್ಟ ಎಂದು ಹೇಳಿದ್ದಾರೆ. ಇಶಾನ್ ಕಿಶನ್ ಕೂಡ ಸಾಕಷ್ಟು ಸಮಯದಿಂದ ಅವಕಾಶಕ್ಕಾಗಿ ಕಾಯುತ್ತಿದ್ದರು. ಸಿಕ್ಕ ಅವಕಾಶವನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
Ind vs Ban 3rd ODI : 72ನೇ ಶತಕ ಗಳಿಸಿ ಬರೋಬ್ಬರಿ 5 ದಾಖಲೆಗಳನ್ನು ಮುರಿದ 'ಕಿಂಗ್ ಕೊಹ್ಲಿ'

5 ವರ್ಷಗಳಿಂದ ಭಾರತ ತಂಡಕ್ಕಾಗಿ ಆಡಿಲ್ಲ
ಕರುಣ್ ನಾಯರ್ ನವೆಂಬರ್ 2016 ರಲ್ಲಿ ಮೊಹಾಲಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ಅವರು ಕೇವಲ 4 ರನ್ ಗಳಿಸಿ ಔಟ್ ಆದರು. ಮುಂಬೈನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅವರು 13 ಗಳಿಸಿ ಮತ್ತೆ ವೈಫಲ್ಯ ಅನುಭವಿಸಿದರು.
ಆದರೆ, ಚೆನ್ನೈನಲ್ಲಿ ನಡೆದ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ 381 ಎಸೆತಗಳಲ್ಲಿ ಅಜೇಯ 303 ರನ್ ಗಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ತಬ್ಬಿಬ್ಬುಗೊಳಿಸಿದರು. ಅವರ ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 32 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಇದ್ದವು.
ಮಾರ್ಚ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್ ವೈಫಲ್ಯ ಅನುಭವಿಸಿದರು. ನಾಲ್ಕು ಇನ್ನಿಂಗ್ಸ್‌ಗಳಿಂದ ಅವರು 26 ರನ್ ಗಳಿಸಿದರು. ಆ ನಂತರ ಕರುಣ್ ನಾಯರ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲಿಲ್ಲ. ಅವರು ಭಾರತಕ್ಕಾಗಿ ಕೇವಲ 6 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ನಿಮ್ಮ ಸಮಯಕ್ಕಾಗಿ ಕಾಯಿರಿ ಎಂದ ನೆಟ್ಟಿಗರು
ಕರುಣ್ ನಾಯರ್ ಟ್ವೀಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ, ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕರುಣ್ ನಾಯರ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, "ಧೈರ್ಯ ಕಳೆದುಕೊಳ್ಳಬೇಡ, ನೀವು ಅತ್ಯುತ್ತಮ ಕ್ರಿಕೆಟಿಗ, ನಿನಗೆ ಅವಕಾಶ ಸಿಗುತ್ತದೆ" ಎಂದು ಭರವಸೆ ತುಂಬಿದ್ದಾರೆ.
2017ರಿಂದ ಕರುಣ್ ನಾಯರ್ ಕರ್ನಾಟಕದ ಪರವಾಗಿ ಹಲವು ಪಂದ್ಯಾವಳಿಗಳಲ್ಲಿ ಆಡಿದ್ದರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ನೀವು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ, ನಂತರ ಭಾರತ ತಂಡಕ್ಕೆ ಆಯ್ಕೆಯಾಗುತ್ತೀರಾ ಎಂದು ಹಲವರು ಸಲಹೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications