
ಬೆಂಗಳೂರು, ಸೆಪ್ಟೆಂಬರ್ 8: ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಟಿ10 ಕ್ರಿಕೆಟ್ ಟೂರ್ನಿಯ ಎರಡನೆ ಪಂದ್ಯದಲ್ಲಿ ಶಿವರಾಜ್‌ಕುಮಾರ್ ನೇತೃತ್ವದ ವಿಜಯನಗರ ಪ್ಯಾಟ್ರಿಯಾಟ್ಸ್ ತಂಡದ ವಿರುದ್ಧ ಯಶ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡ ಎರಡು ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಗೆಲ್ಲಲು ಬೇಕಿದ್ದ 112 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ ತಂಡ 109 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಹಂತದಲ್ಲಿ ಬಿ.ಆರ್, ಶರತ್ ನಡೆಸಿದ ಹೋರಾಟ ವಿಫಲವಾಯಿತು. ಕಡೆಯ ಚೆಂಡಿನಲ್ಲಿ ಗೆಲ್ಲಲು ನಾಲ್ಕು ರನ್ ಬೇಕಿತ್ತು. ಆದರೆ, ಮದರಂಗಿ ಕೃಷ್ಣ ಯಾರ್ಕರ್ ಎಸೆದು ಕೇವಲ ಒಂದು ರನ್ ನೀಡಿದರು.
ವಿಜಯನಗರ ಪ್ಯಾಟ್ರಿಯಾಟ್ಸ್ ಪರವಾಗಿ ಬಿ.ಆರ್. ಶರತ್ ಅಜೇಯ 48 (19) ರನ್ ಗಳಿಸಿದರು. ಪಂದ್ಯದ ಪ್ರಮುಖ ಆಕರ್ಷಣೆಯಾದ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್ 21 ರನ್ ಗಳಿಸಿ ಪ್ರೀತಂ ಗುಬ್ಬಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಎರಡು ಓವರ್‌ಗಳಲ್ಲಿ 24 ರನ್ ನೀಡಿದ ಗುಬ್ಬಿ, ಮೂರು ವಿಕೆಟ್ ಕಿತ್ತು ವಿಜಯನಗರ ತಂಡದ ಸೋಲಿಗೆ ಕಾರಣರಾದರು.
ಟಾಸ್ ಗೆದ್ದ ಯಶ್ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಓವಿಯಸ್ ಶಾ ಮತ್ತು ರಾಜೀವ್ ಅರ್ಧಶತಕದ ಜತೆಯಾಟ ನೀಡಿದರು. ಓವಿಯಸ್ ಶಾ ರನ್ ಗಳಿಸಲು ಪರದಾಡಿದರು. ಆದರೆ, ಇನ್ನೊಂದೆಡೆ ಅಬ್ಬರಿಸಿದ ರಾಜೀವ್, 28 ಎಸೆತಗಳಲ್ಲಿ 65 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಯಶ್ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಓವಿಯಸ್ ಶಾ ಮತ್ತು ರಾಜೀವ್ ಅರ್ಧಶತಕದ ಜತೆಯಾಟ ನೀಡಿದರು.
ಅವರಿಗೆ ಕೃಷ್ಣ 22 ರನ್ ಗಳಿಸಿ ಉತ್ತಮ ಸಾತ್ ನೀಡಿದರು. ಅಂತಿಮವಾಗಿ ಯಶ್ ತಂಡ 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿತು. ವಿಜಯನಗರ ತಂಡದ ಪರವಾಗಿ ಅಭಿಷೇಕ್ 15 ರನ್ ನೀಡಿ 2
ವಿಕೆಟ್ ಪಡೆದರು.
ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಡಂ ಗಿಲ್‌ಕ್ರಿಸ್ಟ್ ಈ ಪಂದ್ಯದ ಪ್ರಮುಖ ಆಕರ್ಷಣೆ. ಗಿಲ್‌ಕ್ರಿಸ್ಟ್, ಶಿವರಾಜ್‌ಕುಮಾರ್ ಅವರ ತಂಡದಲ್ಲಿ ಆಡುತ್ತಿದ್ದಾರೆ. ಇಂಗ್ಲೆಂಡ್ ತಂಡದ ಆಟಗಾರ ಓವಿಯಸ್ ಶಾ, ಯಶ್ ತಂಡದಲ್ಲಿ ಆಡುತ್ತಿದ್ದಾರೆ.
ಮೊದಲ ರೋಚಕ ಪಂದ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜಸ್ ತಂಡ, ಕಿಚ್ಚ ಸುದೀಪ್ ನೇತೃತ್ವದ ಕದಂಬ ಲಯನ್ಸ್ ತಂಡವನ್ನು ಸೋಲಿಸಿದೆ.
ಸಿನಿಮಾ ತಾರೆಯರು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ ಹಿರಿಯ ಆಟಗಾರರು ಮತ್ತು ರಾಜ್ಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಆಟಗಾರರನ್ನು ಒಳಗೊಂಡ ತಂಡಗಳು ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿವೆ.
ತಂಡಗಳು
ವಿಜಯನಗರ ಪ್ಯಾಟ್ರಿಯಾಟ್ಸ್: ಶಿವರಾಜ್‌ಕುಮಾರ್, ಆಡಂ ಗಿಲ್‌ಕ್ರಿಸ್ಟ್, ಕಿರಣ್, ಕುಂಗ್‌ಫು ಚಂದ್ರು, ಧರ್ಮ ಕೀರ್ತಿರಾಜ್, ಚಂದನ್, ಅಭಿಷೇಕ್, ಕೆ.ಸಿ. ಕಾರಿಯಪ್ಪ, ಶರತ್ ಬಿ.ಆರ್., ಪ್ರದೀಪ್ ಟಿ., ಅರುಣ್ ಗೌಡ
ರಾಷ್ಟ್ರಕೂಟ ಪ್ಯಾಂಥರ್ಸ್: ಯಶ್, ಓವಿಯಸ್ ಶಾ, ಲೋಕಿ, ಕೃಷ್ಣ, ರಾಜೀವ್, ಸ್ಟಾಲಿನ್ ಹೂವರ್, ಪ್ರೀತಮ್ ಗುಬ್ಬಿ, ಕಿಶೋರ್ ಕಾಮತ್, ಕೆ.ಎಸ್. ದೇವಯ್ಯ, ಸ್ಟಾಲಿನ್, ಕಾರ್ತಿಕ್ ಗೌಡ