ವಿಶ್ವಕಪ್‌ನಲ್ಲಿ ಭಾರತದ ಪರ ಈ ಆಲ್‌ರೌಂಡರ್ ಆಡುವುದು ನಿಶ್ಚಿತ!

ಮುಂಬೈ, ಮೇ 21: ಕಳೆದ ವಾರ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ವೇಳೆ ಭುಜದ ಗಾಯದ ಸಮಸ್ಯೆಗೆ ತುತ್ತಾಗಿದ್ದ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಕೇದಾರ್ ಜಾಧವ್ ಇದೀಗ ಸಂಪೂರ್ಣ ಗುಣಮುಖರಾಗಿದ್ದು ವಿಶ್ವಕಪ್ ನಲ್ಲಿ ಆಡಲು ಸಂಪೂರ್ಣ ಫಿಟ್ ಆಗಿದ್ದಾರೆ.
ಹೀಗಾಗಿ ಮೇ 30ರಂದಿ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಆರಂಭವಾಗಲಿರುವ 12ನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತದ 15 ಆಟಗಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲವಾಗಿದೆ.
34 ವರ್ಷದ ಆಟಗಾರ ಜಾಧವ್, ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದು, ಯಾವುದೇ ರೀತಿಯ ನೋವಿನ ಸಮಸ್ಯೆ ಎದುರಿಸಿಲ್ಲ. ಈ ಕುರಿತಾಗಿ ತಂಡದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾರ್ಟ್ ಆಯ್ಕೆ ಸಮಿತಿಗೆ ತಿಳಿಸಿದ್ದು, ಜಾಧವ್ ಅವರನ್ನು 15 ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಆಯ್ಕೆ ಸಮಿತಿ ಸಮ್ಮತಿಸಿದೆ ಎಂದು ವರದಿಯಾಗಿದೆ.
ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ವೇಳೆ ಜಾಧವ್ ತಮ್ಮ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಮೇಲ್ನೋಟಕ್ಕೆ ಜಾಧವ್ ಅವರ ಗಾಯದ ಸಮಸ್ಯೆ ಗಂಭೀರವಾಗಿದ್ದಂತೆ ಗೋಚರಿಸಿತ್ತು. ಬಳಿಕ ಆಟ ಮುಂದುವರಿಸಲು ಸಾಧ್ಯವಾಗದೆ ಕ್ರೀಡಾಂಗಣದಿಂದ ಹೊರ ನಡೆದಿದ್ದರು.
ಆದರೂ, ವಿಶ್ವಕಪ್‌ಗೆ ಪ್ರಕಟಿಸಲಾದ 15 ಆಟಗಾರರ ಪಟ್ಟಿಯಿಂದ ಜಾಧವ್ ಅವರನ್ನು ಕೈಬಿಡುವ ಆತುರಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಲಿಲ್ಲ. ಜಾಧವ್‌ಗೆ ತಮ್ಮ ಫಿಟ್ನೆಸ್ ಸಾಬೀತು ಪಡಿಸಲು ಅಗತ್ಯದ ಕಾಲಾವಕಾಶವನ್ನು ನೀಡಿತ್ತು. ಒಂದು ವೇಳೆ ಜಾಧವ್ ಚೇತರಿಸದೇ ಇದ್ದರೆ, ಕಾಯ್ದಿರಿಸಲ್ಪಟ್ಟ ಆಟಗಾರರಾದ ರಿಶಭ್ ಪಂತ್, ಅಂಬಾಟಿ ರಾಯುಡು, ಇಶಾಂತ್ ಶರ್ಮಾ, ಅಕ್ಷರ್ ಪಟೇಲ್ ಅಥವಾ ನವದೀಪ್ ಸೈನಿ ಅವರಲ್ಲಿ ಒಬ್ಬರು ತಂಡ ಸೇರಿಕೊಳ್ಳುತ್ತಿದ್ದರು.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಜೂನ್ 5ರಂದು ಸೌತ್‌ಹ್ಯಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ವಿಶ್ವಕಪ್‌ಗೆ ಭಾರತ ಪ್ರಕಟಿಸಿರುವ 15 ಆಟಗಾರರ ತಂಡ ಇಂತಿದೆ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ವಿಜಯ್ ಶಂಕರ್, ಕೇದಾರ್ ಜಾಧವ್, ಎಂ.ಎಸ್ ಧೋನಿ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications