ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನವೆಂಬರ್ 14 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಸರಣಿಗೆ ಉಭಯ ತಂಡಗಳು ಭರದ ಸಿದ್ಧತೆ ನಡೆಸಿವೆ. ಈ ಸರಣಿಯಲ್ಲಿ ಜಯ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಎರಡೂ ತಂಡಗಳದ್ದಾಗಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ನೆಟ್ಸ್‌ನಲ್ಲಿ ಭರದ ಸಿದ್ಧತೆ ನಡೆಸಿವೆ. ಪ್ರವಾಸಿ ದಕ್ಷಿಣ ಆಫ್ರಿಕಾ ಮೈದಾನಕ್ಕೆ ಇಳಿಯುವ ಮುನ್ನವೇ ಭಾರತಕ್ಕೆ ಎಚ್ಚರಿಕೆ ನೀಡಿದೆ. ಅಲ್ಲದೆ ತಮ್ಮನ್ನು ಹಗುರವಾಗಿ ಪರಿಗಣಿಸದಂತೆ ತಿಳಿಸಿದೆ.
ಈ ಹಿಂದಿನ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದ ದಕ್ಷಿಣ ಆಫ್ರಿಕಾ, ಭಾರತದಲ್ಲೂ ಚಾಂಪಿಯನ್ ಆಟವನ್ನು ಆಡಲು ಸಿದ್ಧವಾಗಿದೆ. ಈ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡದ ಕೇಶವ್ ಮಹಾರಾಜ್ ತಮ್ಮ ತಂಡ ಸ್ಪಿನ್ ಸ್ಪಿನ್ ಟ್ರ್ಯಾಕ್ ಎದುರಿಸಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮೊದಲ ಟೆಸ್ಟ್‌ಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಶವ್ ಮಹಾರಾಜ್, ಇದು ನಮಗೆ ಇದುವರೆಗಿನ ಕಠಿಣ ಪ್ರವಾಸಗಳಲ್ಲಿ ಒಂದು ಎಂದು ತಿಳಿದಿದೆ. ಈ ಪ್ರವಾಸದಲ್ಲಿ ನಮಗೆ ಸರಣಿ ಗೆಲ್ಲುವ ಉತ್ತಮ ಅವಕಾಶ ಇದೆ. ಇಲ್ಲಿನ ಪಿಚ್‌ಗಳು ಸಹ ಪಾಕಿಸ್ತಾನದಲ್ಲಿ ಆಡಿದಂತೆ ಸ್ಪಿನ್ ಪಿಚ್‌ಗಳಾಗಿರುತ್ತವೆ ಎಂದು ನಾವು ಭಾವಿಸುವುದಿಲ್ಲ. ನಿಶ್ಚಿತವಾಗಿ ಪಂದ್ಯ ಮುಂದೆ ಸಾಗಿದಂತೆ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಲಿದೆ. ವಿಂಡೀಸ್ ವಿರುದ್ಧ ಸರಣಿಯನ್ನು ನೋಡಿದಾಗ, ಇಲ್ಲಿನ ಪಿಚ್‌ಗಳು ಸಾಕಷ್ಟು ಉತ್ತಮವಾಗಿ ಎಂದು ಅನಿಸುತ್ತದೆ ಎಂದು ತಿಳಿಸಿದ್ದಾರೆ.
ಭಾರತ ತಂಡದ ಬಗ್ಗೆ ಮಾತನಾಡಿರುವ ಕೇಶವ್ ಮಹಾರಾಜ್, ಆತಿಥೇಯ ತಂಡ ಬದಲಾವಣೆಯತ್ತ ಸಾಗುತ್ತಿದೆ ಎಂದಿದ್ದಾರೆ. ಇನ್ನು ವಿಂಡೀಸ್ ವಿರುದ್ಧದ ಸರಣಿಯಲ್ಲಿ ಇದ್ದಂತೆ ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ಭಾವಿಸುವೆ. ಇನ್ನು ಪಾಕ್ ಪ್ರವಾಸದ ಕೊನೆಯ ಟೆಸ್ಟ್‌ನಲ್ಲಿ ಸಾಧಿಸಿದ್ದ ಗೆಲುವಿನ ವಿಶ್ವಾಸವನ್ನು ನಾವು ಈ ಸರಣಿಯಲ್ಲೂ ಮುಂದು ವರೆಸುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇಶವ್ ಮಹಾರಾಜ್ ಸಾಧನೆ ಸ್ಥಿರವಾಗಿದೆ. ಇವರು ಆಡಿದ 60 ಟೆಸ್ಟ್ ಪಂದ್ಯಗಳಲ್ಲಿ 3.09 ಎಕಾನಮಿಯಲ್ಲಿ 212 ವಿಕೆಟ್ ಕಬಳಿಸಿದ್ದಾರೆ. ಕೇಶವ್ ಮಹಾರಾಜ್ ಭಾರತದಲ್ಲಿ ಆಡಿದ 8 ಟೆಸ್ಟ್ ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ.