ರಹಾನೆ, ದುಬೆ ಆರ್ಭಟ: ಕೆಕೆಆರ್ ವಿರುದ್ಧ ಬೃಹತ್ ಗೆಲುವು ಸಾಧಿಸಿದ CSK: ಅಂಕಪಟ್ಟಿಯಲ್ಲಿ ನಂಬರ್ 1
ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅಬ್ಬರದ ಪ್ರದರ್ಶನ ನೀಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತವರಿನಲ್ಲಿ ಪಂದ್ಯ ನಡೆದು ಟಾಸ್ ಗೆದ್ದುಕೊಂಡಿದ್ದರೂ ಈ ಪಂದ್ಯದಲ್ಲಿ ಯಾವ ಹಂತದಲ್ಲಿಯೂ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನಿತೀಶ್ ರಾಣಾ ಪಡೆ ಈ ಪಂದ್ಯದಲ್ಲಿ ರನ್‌ಗಳ ಬೃಹತ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 236 ರನ್‌ಗಳ ಬೃತ್ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಕೆಕೆಆರ್ ತಂಡ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಯಿತು. ತಂಡದ ಮೊತ್ತ 1 ರನ್‌ಗಳಾಗಿದ್ದಾಗ 2 ವಿಕೆಟ್ ಕಳೆದುಕೊಂಡು ಕೆಕೆಆರ್ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ವೆಂಕಟೇಶ್ ಹಾಗೂ ನಾಯಕ ನಿತೀಶ್ ರಾಣಾ ತಂಡಕ್ಕೆ ಸಣ್ಣ ಚೇತರಿಕೆಯ ಪ್ರದರ್ಶನ ನೀಡಿದರು. ಈ ಜೋಡಿ ಬೇರ್ಪಟ್ಟ ಬಳಿಕ ಜೇಸನ್ ರಾಯ್ ಕ್ರೀಸ್‌ಗಿಳಿದು ಕೆಲ ಕಾಲ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೆಕೆಆರ್ ಅಭಿಮಾನಿಗಳನ್ನು ಮನರಂಜಿಸಿದರು.

ರಿಂಕು ಸಿಂಗ್ ಜೊತೆಗೆ ಜೇಸನ್ ರಾಯ್ ಒಂದು ಉತ್ತಮ ಜೊತೆಯಾಟದಲ್ಲಿ ಭಾಗಿಯಾದರು. ಕೇವಲ 26 ಎಸೆತಗಳನ್ನು ಎದುರಿಸಿದ ರಾಯ್ 61 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ರಾಯ್ ಔಟಾದ ಬಳಿಕ ಕ್ರೀಸ್‌ಗಿಳಿದ ಆಂಡ್ರೆ ರಸೆಲ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು. ಇನ್ನು ರಿಂಕು ಸಿಂಗ್ ಈ ಪಂದ್ಯದಲ್ಲಿ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಅರ್ಧ ಶತಕ ಸಿಡಿಸಿ ಗಮನಸೆಳೆದರು. 33 ಎಸೆತಗಳನ್ನು ಎದುರಿಸಿದ ಅವರು 53 ರನ್ ಬಾರಿಸಿ ಅಜೇಯವಾಗುಳಿದರು.
ಕೆಕೆಆರ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 186 ರನ್‌ಗಳಿಸಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತು. ಈ ಮೂಲಕ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 49 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಆಡಿರುವ 7 ಪಂದಗ್ಯಗಳಲ್ಲಿ 5 ಪಂದ್ಯ ಗೆದ್ದಿರುವ ಸಿಎಸ್‌ಕೆ 10 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ.
ಇನ್ನು ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಪಂದ್ಯದಲ್ಲಿ 4 ವಿಕೆಟ್ ಕಳೆದುಕೊಂಡು ಬರೊಬ್ಬರಿ 235 ರನ್‌ಗಳನ್ನು ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಗ್ರ ಕ್ರಮಾಂಕದ ಎಲ್ಲಾ ಆಟಗಾರರು ಕೂಡ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಅಜಿಂಕ್ಯಾ ರಹಾನೆ ಹಾಗೂ ಶಿವಂ ದುಬೆ ಕೊಲ್ಕತ್ತಾ ನೈಟ್ ರೈಡರ್ಸ್ ಬೌಲರ್‌ಗಳನ್ನು ಅಟ್ಟಾಡಿಸಿ ಬಾರಿಸಿದರು. ಈ ಜೋಡಿ ಕೇವಲ 32 ಎಸೆತಗಳಲ್ಲಿ 84 ರನ್‌ಗಳ ಜೊತೆಯಾಟ ನೀಡುವ ಮೂಲಕ ಸಿಎಸ್‌ಕೆ ತಂಡ ಬೃಹತ್ ಮೊತ್ತವನ್ನು ಗಳಿಸಲು ಕಾರಣವಾದರು.
ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಜೋಡಿ ಮೊದಲ ವಿಕೆಟ್‌ಗೆ 73 ರನ್‌ಗಳ ಜೊತೆಯಾಟ ನೀಡಿ ಬೇರ್ಪಟ್ಟಿತು. ಋತುರಾಜ್ 20 ಎಸೆತಗಳಲ್ಲಿ 35 ರನ್‌ಗಳಿಸಿ ಔಟಾದರು. ನಂತರ ಅರ್ಧ ಶಥಕ ಸಿಡಿಸಿದ ಕಾನ್ವೆ 40 ಎಸೆತಗಳಲ್ಲಿ 56 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಜೊತೆಯಾಗಿದ್ದು ರಹಾನೆ ಹಾಗೂ ದುಬೆ ಜೋಡಿ.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆ ಕೇವಲ 21 ಎಸೆತಗಳಲ್ಲಿ 50 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಅಜಿಂಕ್ಯಾ ರಹಾನೆ ಕೊನೆಯ ವರೆಗೂ ವಿಕೆಟ್ ಕಳೆದುಕೊಳ್ಳದೆ ಅಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 29 ಎಸೆತಗಳಲ್ಲಿ ಅವರು 71 ರನ್ ಬಾರಿಸಿ ಅಜೇಯವಾಗುಳಿದರು. ಇನ್ನು ಕೊನೆಯ ಕ್ಷಣದಲ್ಲಿ ರವೀಂದ್ರ ಜಡೇಜಾ 8 ಎಸೆತಗಳನ್ನು ಎದುರಿಸಿ 18 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಎಂಎಸ್ ಧೋನಿ 2 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ಸಿಎಸ್‌ಕೆ ಈ ಪಂದ್ಯದಲ್ಲಿ 4 ವಿಕೆಟ್ ಕಳೆದುಕೊಂಡು 235 ರನ್‌ಗಳಿಸಿತು.
ಕೊಲ್ಕತ್ತಾ ನೈಟ್ ರೈಡರ್ಸ್: ಎನ್ ಜಗದೀಸನ್ (ವಿಕೆಟ್ ಕೀಪರ್), ಜೇಸನ್ ರಾಯ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಸುಯಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications