ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಶನಿವಾರ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದೆ. ಆರ್‌ಸಿಬಿ ವಿರುದ್ಧ ಗೆದ್ದ ಆತ್ಮವಿಶ್ವಾಸದಲ್ಲಿದ್ದ ಕೆಕೆಆರ್ ತಂಡ ಹೋರಾಟದ ಪ್ರದರ್ಶನ ನಿಡಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಮತ್ತೆ ಹಿನ್ನಡೆ ಕಾಣುವಂತಾಗಿದೆ. ಈ ಸೋಲಿನ ಬಳಿಕ ನಾಯಕ ನಿತೀಶ್ ರಾಣಾ ಪ್ರತಿಕ್ರಿಯೆ ನೀಡಿದ್ದು ಸೋಲಿಗೆ ಕಾರಣವಾದ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲು ಅನುಭವಿಸಲು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಹಾಗೂ ಜೊತೆಯಾಟದ ಕೊರತೆಯೇ ಕಾರಣ ಎಂದಿದ್ದಾರೆ ಕೆಕೆಆರ್ ನಾಯಕ ನಿತೀಶ್ ರಾಣಾ. ಈ ಪಂದ್ಯದಲ್ಲಿ ಗುಜರಾತ್ ಟೈಟಮ್ಸ್ ತಂಡ 7 ವಿಕೆಟ್‌ಗಳ ಅಂತರದಿಂದ ಇನ್ನು 13 ಎಸೆತಗಳು ಬಾಕಿಯಿರುವಂತೆಯೇ ಗೆಲುವು ಸಾಧಿಸಿತು.

"ನಾವು 20-25ರಷ್ಟು ಕಡಿಮೆ ರನ್‌ಗಳಿಸಿದೆವು. ಇನ್ನು ದೊಡ್ಡ ತಂಡಗಳ ವಿರುದ್ಧದ ಪಂದ್ಯದಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲಿದರೆ ಫಲಿತಾಂಶ ಇದಕ್ಕಿಂತ ಭಿನ್ನವಾಗಿರಲಿದೆ ಎಂದು ನನಗೆ ಅನಿಸುತ್ತಿಲ್ಲ. ಗುರ್ಬಾಜ್ ಹಾಗೂ ರಸೆಲ್ ಹೊರತುಪಡಿಸಿದರೆ ಉಳಿದವರ್ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಅಗತ್ಯವಾದ ಜೊತೆಯಾಟ ಬಾರಲೇ ಇಲ್ಲ. 40-50 ರನ್‌ಗಳ ಜೊತೆಯಾಟ ಬಂದಿದ್ದರೆ ನಮ್ಮ ತಂಡದ ಸ್ಕೋರ್ ಇನ್ನೂ ಹೆಚ್ಚಿನದಾಗಿರುತ್ತಿತ್ತು. ಇನ್ನು ಮಧ್ಯಮ ಓವರ್‌ಗಳನ್ನು ಅವರನ್ನು ಸುಮ್ಮನಿರಿಸಬೇಕಾಗಿತ್ತು. ಇಂಥಾ ತಂಡಗಳ ವಿರುದ್ಧ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದಿದ್ದರೆ ನಾವು ಸೋಲನ್ನೂ ಕಾಣಲೇಬೇಕಾಗುತ್ತದೆ" ಎಂದಿದ್ದಾರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ.
"ನಾವು ಮೂರು ವಿಣಾಗದಲ್ಲಿಯೂ ಉತ್ತಮ ಪ್ರದರ್ಶಣ ನೀಡಿದರೆ ಮಾತ್ರವೇನಮಗೆ ಗೆಲುವಿನ ಅವಕಾಶವಿರುತ್ತದೆ. ಅದು ಸಾಧ್ಯವಾಗದಿದ್ದರೆ ಫಲಿತಾಂಶ ನಮ್ಮ ವಿರುದ್ಧವೇ ಬರುತ್ತದೆ. ನನ್ನ ಪ್ರಕಾರ ದೊಡ್ಡ ಕ್ಷಣಗಳಿಗಿಂತಲೂ ಇಂಥಾ ಸಣ್ಣ ಸಣ್ಣ ಕ್ಷಣಗಳು ಬಹಳ ಮುಖ್ಯವಾಗುತ್ತದೆ. ಕ್ಯಾಚ್ ಪಡೆಯುವುದು ಫೀಲ್ಡಿಂಗ್ ಉತ್ತಮವಾಗಿ ಮಾಡುವಂತಾ ಸಣ್ಣ ಸಣ್ಣ ವಿಚಾರಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರೆ ಮಾತ್ರ ಗೆಲುವಿನ ಅವಕಾಶ ಹೆಚ್ಚಿರುತ್ತದೆ" ಎಂದಿದ್ದಾರೆ ರಾಣಾ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆಕೆಆರ್ ಪರವಾಗಿ ರಹ್ಮನುಲ್ಲಾಹ್ ಗರ್ಬಾಜ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು, 39 ಎಸೆತಗಳನ್ನು ಎದುರಿಸಿದ ಅವರು ಭರ್ಜರಿ 81 ರನ್‌ಗಳಿಸಿ ವಿಕೆಟ್ ಕಳೆದುಕೊಂಡು. ಆದರೆ ಅವರಿಗೆ ಮತ್ತಿಂದು ತುದಿಯಲ್ಲಿ ಉತ್ತಮ ಸಾಥ್ ದೊರೆಯಲಿಲ್ಲ. ಅಂತಿಮ ಹಂತದಲ್ಲಿ ಕೆಕೆಆರ್ ತಂಡಕ್ಕೆ ಆಸರೆಯಾಗಿದ್ದು ಆಂಡ್ರೆ ರಸೆಲ್. 19 ಎಸೆತಗಳನ್ನು ಎದುರಿಸಿದ ರಸೆಲ್ 34 ರನ್ ಬಾರಿಸಿ ಅಬ್ಬರಿಸಿದರು. ಹೀಗಾಗಿ ಕೆಕೆಆರ್ ತಂಡ 179 ರನ್‌ಗಳನ್ನು ಗಳಿಸಲು ಶಕ್ತವಾಯಿತು.
ಇದನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ಉತ್ತಮ ಆರಂಭವನ್ನು ಪಡೆಯಿತು. ಶುಬ್ಮನ್ ಗಿಲ್ ಭರ್ಜರಿ ಪ್ರದರ್ಶನ ನೀಡಿ 49 ರನ್‌ಗಳಿಗೆ ಔಟಾದರೆ ಹಾರ್ದಿಕ್ ಪಾಂಡ್ಯ 26 ರನ್‌ಗಳಿಸಿದರು. ಅಂತಿಮ ಹಂತದಲ್ಲಿ ವಿಜತ್ ಶಂಕರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು 24 ಎಸೆತಗಳಲ್ಲಿ 51 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಜಿಟಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಮತ್ತೊಂದು ತುದಿಯಲ್ಲಿ ಡೇವಿಡ್ ಮಿಲ್ಲರ್ 32 ರನ್‌ಗಳಿಸಿ ಅಜೇಯವಾಗುಳಿದರು.