ಭಾನುವಾರ, ಏಪ್ರಿಲ್ 21ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 36ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೇವಲ 1 ರನ್‌ನಿಂದ ಸೋತ ಬಳಿಕ ದಿನೇಶ್ ಕಾರ್ತಿಕ್ ಅಭಿಮಾನಿಗಳಿಂದ ಭಾರೀ ಟೀಕೆಗಳನ್ನು ಎದುರಿಸಬೇಕಾಯಿತು.
ಆರ್‌ಸಿಬಿ ತಂಡದ ರನ್-ಚೇಸ್‌ನ ಅಂತ್ಯದಲ್ಲಿ ಅನುಭವಿ ಬ್ಯಾಟರ್-ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಬಾಲಂಗೋಚಿ ಕರ್ಣ್ ಶರ್ಮಾಗೆ ಬ್ಯಾಟಿಂಗ್ ಸ್ಟ್ರೈಕ್ ನೀಡಲು ನಿರಾಕರಿಸಿದ್ದರಿಂದ ಅಭಿಮಾನಿಗಳು ಕೋಪಗೊಂಡಿದ್ದಾರೆ.

ಕರ್ಣ್ ಶರ್ಮಾ ಅವರಿಗೆ ದೊಡ್ಡ ಶಾಟ್ ಆಡುವ ಸಾಮರ್ಥ್ಯವಿದ್ದರೂ, ದಿನೇಶ್ ಕಾರ್ತಿಕ್ ಸಿಂಗಲ್ಸ್ ನಿರಾಕರಿಸಿ ಸ್ಟ್ರೈಕ್ ಬಿಟ್ಟುಕೊಡಲಿಲ್ಲ. ಸ್ಪಿನ್ ಬೌಲರ್‌ನ ಕಡಿಮೆ ಅಂದಾಜು ಮಾಡಿದ್ದಕ್ಕೆ ಅಂತಿಮವಾಗಿ ಆರ್‌ಸಿಬಿ ತಂಡ ಕೇವಲ 1 ರನ್‌ನಿಂದ ಸೋಲಬೇಕಾಯಿತು ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
ಏಕೆಂದರೆ, ಮಿಚೆಲ್ ಸ್ಟಾರ್ಕ್ ಅವರ ಕೊನೆಯ ಓವರ್‌ನಲ್ಲಿ ಮೂರು ಭರ್ಜರಿ ಸಿಕ್ಸರ್‌ಗಳ ಸಮೇತ ಕರ್ಣ್ ಶರ್ಮಾ ಕೇವಲ 7 ಎಸೆತಗಳಲ್ಲಿ 20 ರನ್ ಗಳಿಸಿದರು. ಆರ್‌ಸಿಬಿ ತಂಡ 223 ರನ್‌ಗಳ ಬೃಹತ್ ಗುರಿ ಬೆನ್ನಟ್ಟಲು ಬಹುತೇಕ ನೆರವಾಗಿದ್ದರು.
18ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಸುಯಶ್ ಪ್ರಭುದೇಸಾಯಿ ಅವರ ನಿರ್ಣಾಯಕ ವಿಕೆಟ್ ಕಳೆದುಕೊಂಡ ಬಳಿಕ ಕರ್ಣ್ ಶರ್ಮಾ ಬ್ಯಾಟಿಂಗ್‌ಗೆ ಬಂದರು. ಆದರೆ, ದಿನೇಶ್ ಕಾರ್ತಿಕ್ ಸಿಂಗಲ್ಸ್ ತೆಗೆದುಕೊಳ್ಳಲು ತಿರಸ್ಕರಿಸಿದರು ಮತ್ತು ತನ್ನ ಜೊತೆಗಾರನ ಮೇಲೆ ನಂಬಿಕೆಯನ್ನು ತೋರಿಸಲು ನಿರಾಕರಿಸಿದರು.

ಈ ಮಧ್ಯೆ, ಬೇಕಾಗಿರುವ ರನ್ ರೇಟ್ ರಾಕೆಟ್ ರೀತಿ ಏರುತ್ತಲೇ ಇತ್ತು. 19ನೇ ಓವರ್‌ನ ಕೊನೆಯ ಎಸೆತದಲ್ಲಿ ದಿನೇಶ್ ಕಾರ್ತಿಕ್ 18 ಎಸೆತಗಳಲ್ಲಿ 25 ರನ್ ಗಳಿಸಿದ್ದಾಗ ಆಂಡ್ರೆ ರಸೆಲ್ ವಿರುದ್ಧ ದೊಡ್ಡ ಶಾಟ್ ಬಾರಿಸಲು ಹೋಗಿ ಔಟಾದರು.
ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 21 ರನ್‌ಗಳ ಅಗತ್ಯವಿದ್ದಾಗ, ದಾಳಿಗಿಳಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ 4 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು. ಇನ್ನೇನು ಆರ್‌ಸಿಬಿ ಗೆದ್ದೇ ಬಿಟ್ಟಿತು ಎಂಬಂತೆ ಮೈದಾನದ ವಾತಾವರಣವಿತ್ತು.
ಎಡಗೈ ಬ್ಯಾಟರ್ ಕರ್ಣ್ ಶರ್ಮಾ ಗುರಿಯನ್ನು 2 ಎಸೆತಗಳಲ್ಲಿ 3 ರನ್‌ಗಳಿಗೆ ಇಳಿಸಿದರು. ಕೊನೆಯ ಓವರ್‌ಗೂ ಮುನ್ನ ಅನಿಶ್ಚಿತತೆ ಸ್ಥಿತಿಯಲ್ಲಿದ್ದ ಕಾರಣ, ಕರ್ಣ್ ಶರ್ಮಾ ತನ್ನ ತಂಡಕ್ಕೆ ಪವರ್-ಹಿಟ್ಟಿಂಗ್ ಮೂಲಕ ಅದ್ಭುತ ಪ್ರದರ್ಶನದೊಂದಿಗೆ ಗೆಲ್ಲಲು ಹತ್ತಿರಕ್ಕೆ ಕೊಂಡೊಯ್ದರು. ಆದರೆ 5ನೇ ಎಸೆತದಲ್ಲಿ ಔಟಾಗುವುದರೊಂದಿಗೆ ಆರ್‌ಸಿಬಿ ಗೆಲುವಿನ ಆಸೆ ಕಮರಿತು.
ಕೊನೆಯ ಎಸೆತದಲ್ಲಿ 3 ರನ್ ಬೇಕಾಗಿದ್ದಾಗ, ಲಾಕಿ ಫರ್ಗ್ಯುಸನ್ ಎರಡು ರನ್ ಓಡಲು ಹೋಗಿ ರನೌಟ್ ಆದರು. ಅಂತಿಮವಾಗಿ, ಆರ್‌ಸಿಬಿ 20 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲೌಟ್ ಆಗಿದ್ದರಿಂದ ಕರ್ಣ್ ಶರ್ಮಾ ಪ್ರಯತ್ನ ವ್ಯರ್ಥವಾಯಿತು.
ಇದೀಗ ಆರ್‌ಸಿಬಿ ತಂಡಕ್ಕೆ ಡಾಟ್ ಬಾಲ್‌ಗಳನ್ನು ಆಡಲು ಸಾಧ್ಯವಾಗದ ಹಂತದಲ್ಲಿ ಕರ್ಣ್ ಶರ್ಮಾಗೆ ಸ್ಟ್ರೈಕ್ ನಿರಾಕರಿಸಿದ್ದಕ್ಕಾಗಿ ಅಭಿಮಾನಿಗಳು ದಿನೇಶ್ ಕಾರ್ತಿಕ್‌ರನ್ನು ದೂಷಿಸುತ್ತಿದ್ದಾರೆ.
"ಕರ್ಣ್ ಶರ್ಮಾ ಅವರನ್ನು ಕಡಿಮೆ ಅಂದಾಜು ಮಾಡುವ ಮೂಲಕ ದಿನೇಶ್ ಕಾರ್ತಿಕ್ 3 ಸಿಂಗಲ್ಸ್ ರನ್‌ಗಳನ್ನು ನಿರಾಕರಿಸಿದರು," ಎಂದು ಅಭಿಮಾನಿಯೊಬ್ಬರು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬರೆದಿದ್ದಾರೆ.
ಮತ್ತೊಬ್ಬ ಅಭಿಮಾನಿ, "ದಿನೇಶ್ ಕಾರ್ತಿಕ್ ಅವರು 19ನೇ ಓವರ್‌ನಲ್ಲಿ ಸಿಂಗಲ್ಸ್ ನಿರಾಕರಿಸುತ್ತಿದ್ದರು. ಅವರು ಇನ್ನೊಂದು ತುದಿಯಲ್ಲಿ ಆಕಾಶ್ ಚೋಪ್ರಾ ಅವರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದತೆ ಭಾವಿಸಿದ್ದರು. ಅವರು ದೊಡ್ಡ ಹೊಡೆತಗಳನ್ನು ಹೊಡೆಯಲು ಸಾಧ್ಯವಿಲ್ಲ ಎಂದುಕೊಂಡಿದ್ದರು," ಎಂದು ಬರೆದುಕೊಂಡಿದ್ದಾರೆ.