ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ನಡೆದ ಮುಖಾಮುಖಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆಘಾತಕಾರಿ ಸೋಲು ಅನುಭವಿಸಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ತಂಡ ಬೃಹತ್ ಮೊತ್ತವನ್ನು ಪೇರಿಸಿದ್ದು ಅದನ್ನು ಬೆನ್ನಟ್ಟುವಲ್ಲಿ ಕೆಕೆಆರ್ ಎಡವಿತು. ಈ ಸೋಲಿನ ಬಳಿಕ ಕೆಕೆಆರ್ ನಾಯಕ ನಿತೀಶ್ ರಾಣಾ ಪ್ರತಿಕ್ರಿಯೆ ನೀಡಿದ್ದು ತಂಡದ ಬೌಲಿಂಗ್ ವಿಭಾಗದ ಪ್ರದರ್ಶನಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
"ನನ್ನ ಪ್ರಕಾರ ನಾವು ಇಲ್ಲಿ ನಮ್ಮ ಯೋಜನೆಯಂತೆ ಬೌಲಿಂಗ್ ನಡೆಸಲು ವಿಫಲವಾದೆವು. ಪಿಚ್ ಹೇಗಾದರೂ ಇರಲಿ ಆದರೆ ಇದು 230 ರನ್‌ಗಳನ್ನು ನೀಡುವಂತಾ ಪಿಚ್ ಅಲ್ಲ. ರಿಂಕು ಸಿಂಗ್ ಅವರಿಂದ ಒಂದು ಒಳ್ಳೆಯ ದಿನ ಅಂಥಾ ಅದ್ಭುತ ಇನ್ನಿಂಗ್ಸ್ ಪಡೆಯಲು ಸಾಧ್ಯ. ಪ್ರತಿ ದಿನವೂ ಅದು ಅಸಾಧ್ಯ. ನಾವು ಉತ್ತಮವಾಗಿ ಬ್ಯಾಟಿಂಗ್ ನಡೆಸಿದೆವು. ಸಾಧ್ತವಾದಷ್ಟು ಹೋರಾಟ ನಡೆಸುವುದು ನಮ್ಮ ಯೋಜನೆಯಾಗಿತ್ತು. ಇಲ್ಲಿ ನಮಗೆ ತವರಿನ ಲಾಭವಿದ್ದರೂ 200ಕ್ಕಿಂತ ಹೆಚ್ಚಿನ ಮೊತ್ತವನ್ನು ಬೆನ್ನಟ್ಟುವುದು ಅಷ್ಟು ಸುಲಭವಲ್ಲ. ಆದರೆ ನಾವು ಇಲ್ಲಿ ಉತ್ತಮವಾಘಿ ಬೌಲಿಂಗ್ ದಾಳಿಯನ್ನು ನಡೆಸಬೇಕಾಗಿತ್ತು" ಎಂದಿದ್ದಾರೆ ನಾಯಕ ನಿತೀಶ್ ರಾಣಾ.

ಈ ಪಂದ್ಯದಲ್ಲಿ ಕೆಕೆಆರ್ ಪರವಾಗಿ ಲೂಕಿ ಫರ್ಗ್ಯೂಸನ್, ಉಮೇಶ್ ಯಾದವ್ ಅತ್ಯಂತ ದುಬಾರಿಯಾದರು. ವರುಣ್ ಚಕ್ರವರ್ತಿ ಹಾಗೂ ಸುಯಶ್ ಶರ್ಮಾ ಕೂಡ ಧಾರಾಳವಾಗಿ ರನ್ ಬಿಟ್ಟುಕೊಟ್ಟರು. ಅದರಲ್ಲೂ ಫರ್ಗ್ಯೂಸನ್ ಕೇವಲ 2 ಓವರ್‌ಗಳಲ್ಲಿ 37 ರನ್‌ಗಳನ್ನು ಬಿಟ್ಟುಕೊಟ್ಟು ಆಘಾತ ನೀಡಿದರು. ಇನ್ನು ಉಮೇಶ್ ಯಾದವ್ ಮೂರು ಓವರ್‌ಗಳಲ್ಲಿ 42 ರನ್ ಬಿಟ್ಟುಕೊಟ್ಟಿದ್ದಾರೆ. ತಂಡದ ಪರವಾಗಿ ಆಂಡ್ರೆ ರಸೆಲ್ 2.1 ಓವರ್‌ಗಳಲ್ಲಿ 3 ವಿಕೆಟ್ ಕಬಳಿಸಿ ಎದುರಾಳಿಗೆ ದುಃಸ್ವಪ್ನವಾಗುವ ಸೂಚನೆ ನೀಡಿದರಾದರೂ ಗಾಯದ ಕಾರಣದಿಂದಾಗಿ ಅವರು ಬೌಲಿಂಗ್ ಮೊಟಕುಗೊಳಿಸಬೇಕಾಯಿತು.
ಸನ್‌ರೈಸರ್ಸ್ ಹೈದರಾಬಾದ್ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ಆರಂಭದಲ್ಲಿಯೇ ಆಘಾತವುಂಟಾಯಿತು. ರಹ್ಮನಿಲ್ಲಾ ಗುರ್ಬಾಜ್ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡರು. ಎನ್ ಜಗದೀಶನ್ ಅವರಿಂದ ಮತ್ತೊಂದು ಉತ್ತಮ ಪ್ರದರ್ಶನ ಬಂದಿತಾದರೂ ವೆಂಕಟೇಶ್ ಐಯ್ಯರ್, ಸುನಿಲ್ ನರೈನ್, ಆಂಡ್ರೆ ರಸೆಲ್ ವೈಫಲ್ಯ ಕಂಡರು. ಆದರೆ ನಾಯಕ ನಿತೀಶ್ ರಾಣಾ ಅವರಿಂದು ಅಮೋಘ ಪ್ರದರ್ಶನ ವ್ಯಕ್ತವಾಯಿತು.
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನಿತೀಶ್ ರಾಣಾ 41 ಎಸೆತಗಳಲ್ಲಿ 75 ರನ್‌ಗಳನ್ನು ಗಳಿಸಿದರು. ಇದರಲ್ಲಿ ಐದು ಬೌಂಡರಿ ಹಾಗೂ ಆರು ಸಿಕ್ಸ್ ಒಳಗೊಂಡಿತ್ತು. ಇನ್ನು ಮತ್ತೋರ್ವ ಆಟಗಾರ ರಿಂಕು ಸಿಂಗ್ ಕೂಡ ಈ ಪಂದ್ಯದಲ್ಲಿಯೂ ಅಮೋಘಃ ಪ್ರದರ್ಶನ ನೀಡಿ ಗೆಲುವಿಗಾಗಿ ಮತ್ತೊಮ್ಮೆ ಹೋರಾಟ ನಡೆಸಿದರು. ರಿಂಕು ಈ ಪಂದ್ಯದಲ್ಲಿ 31 ಎಸೆತಗಳಲ್ಲಿ 58 ರನ್‌ಗಳಿಸಿ ಅಜೇಯವಾಗುಳಿದರು. ಅಂತಿಮವಾಗಿ ನಿಗದಿತ 20 ಓವರ್‌ನಲ್ಲಿ ಕೆಕೆಆರ್ 205 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಹೀಗಾಗಿ 23 ರನ್‌ಗಳ ಅಂತರದ ಸೋಲು ಅನುಭವಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ಆಡುವ ಬಳಗ: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡನ್ ಮಾರ್ಕ್ರಾಮ್(ನಾಯಕ), ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್
ಬೆಂಚ್: ಆದಿಲ್ ರಶೀದ್, ಅಕೇಲ್ ಹೊಸೈನ್, ಗ್ಲೆನ್ ಫಿಲಿಪ್ಸ್, ಸಮರ್ಥ್ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಕಾರ್ತಿಕ್ ತ್ಯಾಗಿ, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ವಿವ್ರಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್
ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ : ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಎನ್ ಜಗದೀಸನ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಸುಯಶ್ ಶರ್ಮಾ, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ
ಬೆಂಚ್: ವೆಂಕಟೇಶ್ ಅಯ್ಯರ್, ಅನುಕೂಲ್ ರಾಯ್, ವೈಭವ್ ಅರೋರಾ, ಡೇವಿಡ್ ವೈಸ್, ಮನದೀಪ್ ಸಿಂಗ್, ಟಿಮ್ ಸೌಥಿ, ಜೇಸನ್ ರಾಯ್, ಲಿಟ್ಟನ್ ದಾಸ್, ಕುಲ್ವಂತ್ ಖೆಜ್ರೋಲಿಯಾ, ಹರ್ಷಿತ್ ರಾಣಾ