ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 264 ರನ್ ಕಲೆ ಹಾಕಿದೆ. ಮೊದಲ ದಿನ ಟೀಮ್ ಇಂಡಿಯಾದ ಪರ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಸಹ ಈ ಪಂದ್ಯದಲ್ಲಿ 46 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಈ ಮೂಲಕ ಕೆಎಲ್ ಮತ್ತೊಂದು ದಾಖಲೆ ಬರೆದಿದ್ದಾರೆ.
ಮ್ಯಾಂಚೆಸ್ಟರ್‌ನಲ್ಲಿ ಕೆಎಲ್ ರಾಹುಲ್ ತಮ್ಮ ನೈಜ್ಯ ಕ್ಲಾಸಿಕ್ ಶೈಲಿಯಲ್ಲಿ ಬ್ಯಾಟ್ ಮಾಡಿದರು. ಇವರು ಇಂಗ್ಲೆಂಡ್ ಬೌಲರ್‌ಗಳಿಗೆ ಕೆಲ ಕಾಲ ಕಾಟ ನೀಡಿದರು. ಇವರು 98 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 46 ರನ್ ಸಿಡಿಸಿದರು. ಕೆಎಲ್ ಅವರ ಈ ಇನಿಂಗ್ಸ್ ಅವರಿಗೆ ದಾಖಲೆಯ ಪುಟಕ್ಕೆ ಸೇರಲು ಕಾರಣವಾಯಿತು. ಇಂಗ್ಲೆಂಡ್ ವಿರುದ್ಧ ಕೆಎಲ್ ಮೊದಲ ಇನಿಂಗ್ಸ್‌ನಲ್ಲಿ 11 ರನ್ ಬಾರಿಸುತ್ತಿದ್ದಂತೆ ದೊಡ್ಡ ದಾಖಲೆ ಬರೆದರು.

ಕೆಎಲ್ ರಾಹುಲ್ 11 ರನ್ ಬಾರಿಸುತ್ತಿದ್ದಂತೆ ಇಂಗ್ಲೆಂಡ್ ನೆಲದಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದ ಹಿರಿಮೆಯನ್ನು ತನ್ನದಾಗಿಸಿಕೊಂಡರು. ಈ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಅವರಂತಹ ದಿಗ್ಗಜ ಆಟಗಾರರು ಈ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ರನ್‌ಗಳನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಬಾರಿಸಿದ ದಾಖಲೆ ಟೀಮ್ ಇಂಡಿಯಾದ ದಿಗ್ಗಜ ಅಟಗಾರ, ಸಚಿನ್ ತೆಂಡುಲ್ಕರ್ ಅವರದ್ದಾಗಿದೆ. ಇವರು ಆಡಿದ 17 ಪಂದ್ಯಗಳಲ್ಲಿ 54.31ರ ಸರಾಸರಿಯಲ್ಲಿ 1575 ರನ್ ಕಲೆ ಹಾಕಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಇದ್ದಾರೆ. ಇವರು 13 ಪಂದ್ಯಗಳಲ್ಲಿ 1376 ರನ್ ಕಲೆ ಹಾಕಿದ್ದಾರೆ. ಮೂರನೇ ಸ್ಥಾನದಲ್ಲಿ ಸುನಿಲ್ ಗವಾಸ್ಕರ್ ಇದ್ದು, ಇವರು ಆಡಿದ 16 ಪಂದ್ಯಗಳಲ್ಲಿ 1152 ರನ್ ಸಿಡಿಸಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು 17 ಪಂದ್ಯಗಳಲ್ಲಿ 1096 ರನ್ ಬಾರಿಸಿದ್ದಾರೆ. ಈ ಬಳಿಕದ ಸ್ಥಾನದಲ್ಲಿ ಕೆಎಲ್ ರಾಹುಲ್ ಇದ್ದು, ಇವರು 13 ಪಂದ್ಯಗಳಲ್ಲಿ 1035 ರನ್ ಸಿಡಿಸಿದ್ದಾರೆ. ಇವರಿಗೆ ಈ ಪ್ರವಾಸದಲ್ಲಿ ಇನ್ನು ಮೂರು ಇನಿಂಗ್ಸ್ ಆಡುವ ಅವಕಾಶ ಇದ್ದು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಿ ಹಾಕಬಹುದಾಗಿದೆ. ಪ್ರಸಕ್ತ ಇಂಗ್ಲೆಂಡ್ ಸರಣಿಯಲ್ಲಿ ಕೆಎಲ್ ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಆಡಿರುವ 4 ಪಂದ್ಯಗಳಲ್ಲಿ 421 ರನ್ ಕಲೆ ಹಾಕಿದ್ದಾರೆ.