Test Records: ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಡಿಕ್ಲೇರ್ ಮಾಡಿಕೊಂಡ ತಂಡಗಳಿವು

ನ್ಯೂಜಿಲೆಂಡ್‌ನಲ್ಲಿ ಆತಿಥೇಯರ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ದಿನವೇ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ವಿಶಿಷ್ಠ ದಾಖಲೆ ಬರೆದಿದೆ.
2016ರ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವೊಂದು ಮೊದಲ ದಿನ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿತು.
58.2 ಓವರ್ ಗಳಲ್ಲಿ 5.57 ರನ್‌ರೇಟ್‌ನಲ್ಲಿ 325 ರನ್ ಗಳಿಸಿದ್ದ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡಿತ್ತು. ದಿನದ ಕೊನೆಯಲ್ಲಿ ಕೆಲವು ಓವರ್ ಬಾಕಿ ಇದ್ದಾಗ ಡಿಕ್ಲೇರ್ ಮಾಡಿಕೊಂಡು ಅಚ್ಚರಿ ಮೂಡಿಸಿತು. ನಂತರ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ದಿನದಾಂತ್ಯಕ್ಕೆ 37 ರನ್ ಗಳಿಸುವಷ್ಟರಲ್ಲಿ 37 ರನ್ ಗಳಿಸಿದ್ದು 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಬ್ರೆಂಡನ್ ಮೆಕಲಮ್ ಕೋಚ್ ಮತ್ತು ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾದ ಬಳಿಕ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ 10 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 'ಬಾಜ್‌ಬಾಲ್' ಶೈಲಿಯ ಆಟದಲ್ಲಿ ಆಕ್ರಮಣಕಾರಿ ಕ್ರಿಕೆಟ್ ಆಡುವ ಮೂಲಕ ಟೆಸ್ಟ್ ಪಂದ್ಯವನ್ನು ರೋಮಾಂಚನಕಾರಿಯಾಗಿಸಿದೆ.
ಟೆಸ್ಟ್ ಪಂದ್ಯದ ಮೊದಲ ದಿನವೇ ಡಿಕ್ಲೇರ್ ಮಾಡಿಕೊಂಡಿರುವುದು ಇದೇ ಮೊದಲಲ್ಲ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ತಂಡಗಳು ಮೊದಲನೇ ದಿನವೇ ಡಿಕ್ಲೇರ್ ಮಾಡಿಕೊಂಡಿದ್ದವು.

259 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕಾ
2016ರಲ್ಲಿ ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪಂದ್ಯದ ಮೊದಲ ದಿನವೇ ಡಿಕ್ಲೇರ್ ಮಾಡಿಕೊಂಡಿತ್ತು. ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ದಕ್ಷಿಣ ಆಫ್ರಿಕಾ 117 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ನಂತರ ನಾಯಕನ ಆಟವಾಡಿದ ಫಾಫ್ ಡುಪ್ಲೆಸಿಸ್ ಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು 259ಕ್ಕೆ ಹೆಚ್ಚಿಸಿದರು. ಮೊದಲ ದಿನ ಇನ್ನೂ 14 ಓವರ್ ಬಾಕಿ ಇರುವಾಗ ಡಿಕ್ಲೇರ್ ಮಾಡಿಕೊಂಡು ಅಚ್ಚರಿ ಮೂಡಿಸಿದರು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 383 ರನ್ ಗಳಿಸಿದ್ದಲ್ಲದೆ ಅಂತಿಮವಾಗಿ 7 ವಿಕೆಟ್‌ಗಳ ಜಯ ಸಾಧಿಸಿತ್ತು.

ಭಾರತದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ
2013ರ ಬಾರ್ಡರ್ ಗವಾಸ್ಕರ್ ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಭಾರತದ ಬೌಲರ್‌ಗಳು ಕಾಂಗರೂ ಪಡೆಯನ್ನು ಕಾಡಿದರು. ಮೊದಲನೇ ದಿನದಾಟ ಮುಕ್ತಾಯಕ್ಕೆ ಇನ್ನೂ 3 ಓವರ್ ಬಾಕಿಯಿದ್ದಾಗ 9 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಆಸ್ಟ್ರೇಲಿಯಾದ ಈ ನಿರ್ಧಾರ ಯಾವುದೇ ಲಾಭ ನೀಡಲಿಲ್ಲ. ಭಾರತ ಮೊದಲ ದಿನ ವಿಕೆಟ್ ಕಳೆದುಕೊಳ್ಳದೆ ಎಚ್ಚರಿಕೆಯ ಆಟವಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 266 ರನ್‌ಗಳ ಮುನ್ನಡೆ ಸಾಧಿಸಿದ ಭಾರತ ತಂಡ ಅಂತಿಮವಾಗಿ ಇನ್ನಿಂಗ್ಸ್ ಮತ್ತು 135 ರನ್‌ಗಳಿಂದ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.

130 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿದ್ದ ಪಾಕಿಸ್ತಾನ
1974ರಲ್ಲಿ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ನಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ಮೊದಲನೇ ದಿನ ಡಿಕ್ಲೇರ್ ಮಾಡಿಕೊಂಡಿತ್ತು. ಟಾಸ್ ಗೆದ್ದ ಪಾಕ್ ನಾಯಕ ಇಂತಿಖಾಬ್ ಆಲಂ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮಳೆಯ ಕಾರಣದಿಂದ ಹಲವು ಬಾರಿ ಪಂದ್ಯಕ್ಕೆ ಅಡ್ಡಿ ಉಂಟಾಯಿತು. ಡೆರೆಕ್ ಅಂಡರ್‌ವುಡ್ ಮಾರಕ ಬೌಲಿಂಗ್ ದಾಳಿಕೆ ಸಿಕ್ಕಿ ಪಾಕಿಸ್ತಾನ ನಲುಗಿತು. 9 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿದ್ದಾಗ ಪಾಕಿಸ್ತಾನ ಡಿಕ್ಲೇರ್ ಮಾಡಿಕೊಂಡಿತು.
ನಂತರ ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್ ಗಳಿಸಿದ ಇಂಗ್ಲೆಂಡ್ ಮುನ್ನಡೆ ಸಾಧಿಸಿತು. ಆದರೆ, ನಿರಂತರ ಮಳೆ ಸುರಿದ ಕಾರಣ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications