
ಬೆಂಗಳೂರು, ಮೇ 20: ಬಹು ನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 12ನೇ ಆವೃತ್ತಿ ಆರಂಭಕ್ಕೆ ಇನ್ನು ಹತ್ತು ದಿನಗಳು ಮಾತ್ರವೇ ಬಾಕಿ ಉಳಿದಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಆತಿಥೇಯ ಇಂಗ್ಲೆಂಡ್ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ.
2015ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ಸುಗಳಿಸಿರುವ ತಂಡ ಇಂಗ್ಲೆಂಡ್. ಆದ್ದರಿಂದಲೇ ಒಡಿಐ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದೆ.
ಹೀಗಿರುವಾಗ ಇಂಗ್ಲೆಂಡ್ ತಂಡದ ಚಾಂಪಿಯನ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತಾವು ಇಬ್ಬರು ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಖಂಡಿತಾ ಇಂಗ್ಲೆಂಡ್ ಆಟಗಾರರಲ್ಲ ಬದಲಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್.
ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿಯೊಬ್ಬ ಆಟಗಾರನು ಕೂಡ ತಮ್ಮ ಶ್ರೇಷ್ಠ ಪ್ರದರ್ಶನ ನೀಡಲು ಎದುರು ನೋಡುತ್ತಿರುತ್ತಾನೆ. ಈ ಆಟಗಾರರಲ್ಲಿ ಇಬ್ಬರು ಶ್ರೇಷ್ಠರನ್ನು ಆಯ್ಕೆ ಮಾಡುವುದಾದರೆ ಅವರು ವಿರಾಟ್ ಕೊಹ್ಲಿ ಮತ್ತು ಸ್ಟೀವನ್ ಸ್ಮಿತ್ ಎಂದು ಸ್ಟೋಕ್ಸ್ ಹೇಳಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿತಯಾ ಕೂಡ ಪ್ರಶಸ್ತಿ ಗೆಲ್ಲುವ ಫೇವರಿಟ್‌ಗಳಲ್ಲಿ ಒಂದಾದೆ. ಮತ್ತೊಂದೆಡೆ 12 ತಿಂಗಳ ನಿಷೇಧ ಶಿಕ್ಷೆಯ ವನವಾಸ ಮಗಿಸಿ ಬಂದಿರುವ ಸ್ಮಿತ್, ತಮ್ಮ ಬ್ಯಾಟಿಂಗ್ ವೈಭವವನ್ನು ಮರಳಿ ಕಂಡುಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ.
"ಅವರಿಬ್ಬರೂ ಅದ್ಭುತ ಆಟಗಾರರು. ಅವರ ಎದುರು ಬಹಳಷ್ಟು ಬಾರಿ ಆಡಿದ್ದೇನೆ. ಅವರ ವೀಕ್ಷಿಸಿದರೆ ಉಳಿದೆಲ್ಲಾ ಆಟಗಾರರಿಗಿಂತಲೂ ಅತ್ಯಂತ ಸುಲಭವಾಗಿ ಆಡುತ್ತಾರೆ. ಹೀಗಾಗಿ ಇವರಿಬ್ಬರ ಆಟಕ್ಕೆ ನಾನು ಬಹುದೊಡ್ಡ ಅಭಿಮಾನಿ. ಅವರಿಬ್ಬರು ಅವರದ್ದೇ ಆದ ಸ್ಟೈಲ್ ಹೊಂದಿದ್ದಾರೆ. ಅವರಿಬ್ಬರ ಆಟವೂ ವಿಭಿನ್ನ. ಆದರೂ ಇಬ್ಬರೂ ಅತ್ಯಂತ ಪರಿಣಾಮಕಾರಿ ಆಟಗಾರರು. ಖಂಡಿತಾ ಇವರಿಬ್ಬರ ಎದುರು ಸ್ಪರ್ಧಿಸಬೇಕು. ಆದರೆ ಒಬ್ಬ ಕ್ರಿಕೆಟ್ ಪ್ರಿಯನ ದೃಷ್ಟಿಕೋನದಿಂದಲೂ ಇವರಿಬ್ಬರನ್ನು ನೋಡಬೇಕಾಗುತ್ತದೆ. ವಿರಾಟ್ ಮತ್ತು ಸ್ಮಿತ್ ಆಟದಲ್ಲಿನ ಸ್ಥಿರತೆ ವೀಕ್ಷಿಸುವುದು ನನಗೆ ಅತ್ಯಂತ ಪ್ರಿಯಕರವಾದದ್ದು,'' ಎಂದು ಕೊಹ್ಲಿ ಮತ್ತಿ ಸ್ಮಿತ್ ಅವರ ಮೇಲಿನ ಅಭಿಮಾನವನ್ನು 27 ವರ್ಷದ ಆಲ್‌ರೌಂಡರ್ ಹೇಳಿಕೊಂಡಿದ್ದಾರೆ.