

ಅಡಿಲೇಡ್, ಜನವರಿ 15: ಅಡಿಲೇಡ್ ಓವಲ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದಾರೆ. ಇದು ಕೊಹ್ಲಿ ಬಾರಿಸಿದ 39ನೇ ಏಕದಿನ ಶತಕ. ಈ ಸಾಧನೆಯೊಂದಿಗೆ ವಿರಾಟ್ ಅವರು ಶ್ರೀಲಂಕಾ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರ ದಾಖಲೆಯೊಂದನ್ನೂ ಮುರಿದಿದ್ದಾರೆ.
ಮಂಗಳವಾರ (ಜನವರಿ 15) ನಡೆದ ಪಂದ್ಯದಲ್ಲಿ ವಿರಾಟ್ 112 ಎಸೆತಗಳಿಗೆ 104 ರನ್ ಬಾರಿಸಿದ್ದರು. ಈ ಶತಕದೊಂದಿಗೆ ಕೊಹ್ಲಿ ಒಟ್ಟು 64 ಶತಕದ (ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ) ಸಾಧನೆ ಮೆರೆದರು. ಇದು ಅಂತಾರಾಷ್ಟ್ರೀಯ ಅತ್ಯಧಿಕ ಶತಕದ ಸರದಾರರ ಸಾಲಿನಲ್ಲಿ ಕೊಹ್ಲಿಯನ್ನು 3ನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ.
ಒಟ್ಟು 63 ಶತಕಗಳ ಸಾಧನೆಯಿಂದ ಕುಮಾರ್ ಸಂಗಕ್ಕಾರ ವಿಶ್ವದ ಅತ್ಯಧಿಕ ಶತಕ ಸಾಧಕರಲ್ಲಿ 3ನೇ ಸ್ಥಾನದಲ್ಲಿದ್ದರು. ಆದರೆ ಈಗ 64 ಶತಕದ ದಾಖಲೆಯೊಂದಿಗೆ ಕೊಹ್ಲಿ ಅವರು ಸಂಗಕ್ಕಾರ ಅವರನ್ನು 4ನೇ ಸ್ಥಾನಕ್ಕೆ ತಳ್ಳಿ 3ನೇ ಸ್ಥಾನ ಆವರಿಸಿಕೊಂಡಿದ್ದಾರೆ.
ಈ ಯಾದಿಯಲ್ಲಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 100 ಶತಕದ ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಕಲ್ರಿಕೆಟ್ ದಂತಕತೆ ರಿಕಿ ಪಾಂಟಿಂಗ್ ಒಟ್ಟು 71 ಅಂತಾರಾಷ್ಟ್ರೀಯ ಶತಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.
ಅಡಿಲೇಡ್ ನಲ್ಲಿ ನಡೆದ ಭಾರತ vs ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲ ಭಾರತ 6 ವಿಕೆಟ್ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಅಂತಿಮ ಪಂದ್ಯ ಮೆಲ್ಬರ್ನ್ ನಲ್ಲಿ ಜನವರಿ 18ರಂದು ನಡೆಯಲಿದೆ.