
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲನ್ನಪ್ಪುವ ಮೂಲಕ ರಾಜಸ್ಥಾನ್ ರಾಯಲ್ಸ್ ಐಪಿಎಲ್ 13ನೇ ಆವೃತ್ತಿಯಲ್ಲಿ ತನ್ನ ಅಭಿಯಾನ ಮುಗಿಸಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಉಭಯ ತಂಡಗಳು ದುಬೈ ಅಂತರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಕೆಕೆಆರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮೇಲುಗೈ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದು ಯಶಸ್ವಿಯಾದ್ರೂ, ಎದುರಾಳಿ ನಾಯಕ ಇಯಾನ್ ಮಾರ್ಗನ್ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿತು. ಕೆಕೆಆರ್ 7 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು. ಕೆಕೆಆರ್ ಪರ ಶುಭ್ಮನ್ ಗಿಲ್ 36, ರಾಹುಲ್ ತ್ರಿಪಾಠಿ 39, ನಾಯಕ ಇಯಾನ್ ಮಾರ್ಗನ್ ಅಜೇಯ 68 ರನ್‌ಗಳು ಜೊತೆಗೆ ಆಂಡ್ರೆ ರಸ್ಸೆಲ್ 25ರನ್‌ಗಳ ನೆರವಿನಿಂದ 191 ರನ್ ಸಿಡಿಸಿತು.
192ರನ್ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಮೊದಲ ಓವರ್‌ನಲ್ಲೇ 19 ರನ್ ಕಲೆಹಾಕಿ ರಾಬಿನ್ ಉತ್ತಮ ವಿಕೆಟ್ ಕಳೆದುಕೊಂಡಿತು. ಆ ನಂತರ ಪ್ಯಾಟ್ ಕಮಿನ್ಸ್ ಮತ್ತೊಂದು ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದ್ರು. ದಿನೇಶ್ ಕಾರ್ತಿಕ್ ಹಿಡಿದ ಅದ್ಭುತ ಕ್ಯಾಚ್‌ಗೆ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ 18ರನ್‌ಗೆ ಪೆವಿಲಿಯನ್ ಸೇರಬೇಕಾಯ್ತು. ಅದೇ ಓವರ್‌ನಲ್ಲಿ ರಾಯಲ್ಸ್ ನಾಯಕ ಸ್ಟೀವನ್ ಸ್ಮಿತ್ ಕೂಡ ಬೌಲ್ಡ್ ಆಗಿದ್ದು ತಂಡಕ್ಕೆ ನುಂಗಲಾರದ ತುತ್ತಾಯಿತು.
ಸ್ಮಿತ್ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಕೇವಲ ಒಂದು ರನ್‌ಗೆ ಔಟಾಗಿದ್ದು ತಂಡದ ಬ್ಯಾಟಿಂಗ್ ಬೆನ್ನಲುಬು ಮುರಿದಂತಾಯ್ತು. ರಿಯಾನ್ ಪರಾಗ್ ಬಂದಷ್ಟೇ ವೇಗವಾಗಿ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡ್ರು. ಸ್ವಲ್ಪ ಹೋರಾಟ ಪ್ರದರ್ಶಿಸಿದ ಜೋಸ್ ಬಟ್ಲರ್ 35ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ರಾಹುಲ್ ತೆವಾಟಿಯಾ ಆಟ 31ರನ್‌ಗೆ ಕೊನೆಗೊಂಡಿತು.
ಹೀಗೆ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಎಡವಿದ ರಾಜಸ್ಥಾನ್ ರಾಯಲ್ಸ್ 9 ವಿಕೆಟ್ ನಷ್ಟಕ್ಕೆ 131ರನ್‌ಗೆ ಇನ್ನಿಂಗ್ಸ್ ಮುಗಿಸಿತು. ಕೆಕೆಆರ್ ಪರ ಪ್ಯಾಟ್ ಕಮಿನ್ಸ್ 4 ಓವರ್‌ಗಳಲ್ಲಿ 34ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು.
60 ರನ್‌ಗಳ ಗೆಲುವು ಸಾಧಿಸಿದ ಕೆಕೆಆರ್ 14 ಪಾಯಿಂಟ್ಸ್‌ಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು ಪ್ಲೇ ಆಫ್ ಹಂತಕ್ಕೇರಲು ಭಾರೀ ಪೈಪೋಟಿ ನಡೆಸಿದೆ.