ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಲ್ಲಿ ಹುಬ್ಳಿ ಟೈಗರ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಕರ್ನಾಟಕ ತಂಡದ ರಣಜಿ ನಾಯಕ ಆರ್ ವಿನಯ್ ಕುಮಾರ್ ಅವರು ತಮ್ಮ ತಂಡದ ಬಗ್ಗೆ ಮೈಖೇಲ್/ಒನ್ಇಂಡಿಯಾ ಜತೆ ಮಾತನಾಡಿದ್ದಾರೆ. ಯುವಕರ ಪ್ರತಿಭೆ ಅನ್ವೇಷಣೆಗೆ ಕೆಪಿಎಲ್ ಉತ್ತಮ ವೇದಿಕೆ ಎಂದಿದ್ದಾರೆ.
ಯುವಕರಿಗೆ ಹೆಚ್ಚೆಚ್ಚು ಅವಕಾಶ ನೀಡುವುದು ನನ್ನ ಉದ್ದೇಶ, ಯುವ ಆಟಗಾರರು ಹೆಚ್ಚು ಸ್ವಾತಂತ್ರ್ಯ ಪಡೆದು ಆಡುವಂತಾದರೆ ನಿಜವಾದ ಪ್ರತಿಭೆ ಹೊರ ಬರುತ್ತದೆ. ತಂಡದಲ್ಲಿ ಈಗಾಗಲೇ ಕೆಲ ಆಟಗಾರರಿಗೆ ಕೆಪಿಎಲ್ ನಲ್ಲಿ ಆಡಿದ ಅನುಭವವಿದೆ. ಹಿರಿಯ ಆಟಗಾರರಿಂದ ಕಿರಿಯ ಆಟಗಾರರು ಸಾಕಷ್ಟು ಕಲಿತುಕೊಳ್ಳಬಹುದು.

ಹಂತ ಹಂತವಾಗಿ ಬೆಳೆಯಬೇಕು: ಕೆಪಿಎಲ್ ನಲ್ಲಿ ಉತ್ತಮವಾಗಿ ಆಡುವ ಮೂಲಕ ಕರ್ನಾಟಕ ರಣಜಿ ತಂಡಕ್ಕೆ ಸೇರುವ ಅವಕಾಶ ಹೆಚ್ಚಿಸಿಕೊಳ್ಳಬೇಕು. ಕಳೆದ ವರ್ಷ ಸ್ಟಾಲಿನ್ ಹೂವರ್, ಮೊಹಮ್ಮದ್ ತಾಹರಂಥ ಆಟಗಾರರು ಕೆಪಿಎಲ್ ನಲ್ಲಿ ಉತ್ತಮವಾಗಿ ಆಡಿದರು. ನಾನು ಇಂಥ ಯುವ ಆಟಗಾರರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತೇನೆ. ಇದರಿಂದ ಕರ್ನಾಟಕ ತಂಡಕ್ಕೆ ಅನುಕೂಲ ಎಂದರು.
ಟಿ20 ಮಾದರಿ ಮಾತ್ರ ಸೀಮಿತವಾಗಬಾರದು. ಎಲ್ಲಾ ಮಾದರಿಯಲ್ಲಿ ಆಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. 13 ರಿಂದ 14 ವರ್ಷ ಗಳ ಕಾಲ ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿಗ್ಗಜರ ಜತೆ ಆಡಿದ ಅನುಭವ ಹೊಂದಿರುವ ದಾವಣಗೆರೆ ಮೂಲದ ವಿನಯ್ ಕುಮಾರ್ ಅವರು ಈ ಬಾರಿ ಯುವಕರಿಗೆ ಹೆಚ್ಚು ಅದ್ಯತೆ ನೀಡುವುದೇ ನನ್ನ ಗುರಿ ಎಂದು ಮತ್ತೊಮ್ಮೆ ಹೇಳಿದರು.
ಹುಬ್ಳಿ ಟೈಗರ್ಸ್ ತಂಡದಲ್ಲಿ ಹೆಚ್ಚು ಯುವಕರಿದ್ದು, ಕೆಪಿಎಲ್ ಉತ್ತಮ ಅನುಭವ ನೀಡಲಿದೆ. ಹೆಚ್ಚೆಚ್ಚು ಹಿರಿಯ ಆಟಗಾರರ ಜತೆ ಬೆರೆತರೆ ಕಲಿಯುವುದು ಸಾಧ್ಯ ಎಂದರು.(ಒನ್ಇಂಡಿಯಾ ಸುದ್ದಿ)