ಕೆಪಿಎಲ್ 2018: ಬೆಳಗಾವಿ vs ಬೆಂಗಳೂರು ಪಂದ್ಯದ ಮುನ್ನೋಟ

ಬೆಂಗಳೂರು, ಆಗಸ್ಟ್ 14: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ(ಆಗಸ್ಟ್ 15) ಸಂಜೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಬೆಂಗಳೂರು ಬ್ಲಾಸ್ಟರ್ಸ್ ಎದುರಿಸಲಿದೆ. ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಆಗಸ್ಟ್ 15 ರಿಂದ ಸೆಪ್ಟೆಂಬರ್ 06 ರ ತನಕ ನಡೆಯಲಿದೆ.
ಪ್ರಸಕ್ತ ಋತುವಿನ ಪಂದ್ಯಗಳು ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಆರಂಭವಾಗಲಿವೆ. ನಂತರ ಆಗಸ್ಟ್ 19ರಂದು ಹುಬ್ಬಳ್ಳಿಗೆ ಆನಂತರ 29ರಂದು ಮೈಸೂರಿಗೆ ಈ ಟೂರ್ನಿ ತೆರಳಲಿದೆ. ಈ ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್, ಸ್ಟಾರ್ ಸ್ಪೋಟ್ಸ್ ಎಚ್‍ಡಿ ಮತ್ತು ಹಾರ್ಟ್ ಸ್ಟಾರ್ಟ್ ಗಳಲ್ಲಿ ಕೆನಡಾ, ಯುಕೆ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುವುದು.
ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಶಿವಮೊಗ್ಗ ಲಯನ್ಸ್ ಹಾಗ್ ಬೆಂಗಳೂರು ಬ್ಲಾಸ್ಟರ್ಸ್. ಒಟ್ಟು 7 ತಂಡಗಳು 19.5 ಎಂಚು ಎತ್ತರದ ಆಕರ್ಷಕ ಟ್ರೋಫಿಗಾಗಿ ಕಾದಾಡಲಿವೆ.
ಉದ್ಘಾಟನಾ ಸಮಾರಂಭ 5.30ಕ್ಕೆ ನಡೆಯಲಿದ್ದು, ಕನ್ನಡ rapper ಚಂದನ್ ಶೆಟ್ಟಿ, ನಟಿ ರಾಗಿಣಿ ದ್ವಿವೇದಿ, ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್ ಅವರ ಉಪಸ್ಥಿತಿಯಲ್ಲಿ ಕೆಪಿಎಲ್ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತದೆ. ಉದ್ಘಾಟನಾ ಪಂದ್ಯ 6.45ಕ್ಕೆ ಆರಂಭವಾಗಿ 9.55ಕ್ಕೆ ಮುಗಿಸುವ ಯೋಜನೆ ಇದೆ. ಮಿಕ್ಕಂತೆ ಪಂದ್ಯಗಳು ಮಧ್ಯಾಹ್ನ 2 ಹಾಗೂ 6.30ಕ್ಕೆ ನಡೆಯಲಿವೆ ಎಂದು ಕೆಎಸ್ ಸಿಎ ತಿಳಿಸಿದೆ.

ಶುಭಾಂಗ್ ಹೆಗ್ಡೆ ವಿರುದ್ಧ ರಾಬಿನ್ ಉತ್ತಪ್ಪ/ ಪವನ್
18 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ಶುಭಾಂಗ್ ಅವರು ಕೆಎಸ್ ಸಿಎ ಲೀಗ್ ನಲ್ಲಿ ಅದ್ಭುತ ಪ್ರದರ್ಶನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಒಳ್ಳೆ ಹಿಟ್ಟರ್ ಗಳೆನಿಸಿರುವ ರಾಬಿನ್ ಉತ್ತಪ್ಪ ಹಾಗೂ ಪವನ್ ದೇಶಪಾಂಡೆ ಅವರನ್ನು ಶುಭಾಂಗ್ ಅವರು ಹೇಗೆ ಕಟ್ಟಿ ಹಾಕುತ್ತಾರೆ ಎಂಬುದು ಕುತೂಹಲ ಕಾರಿಯಾಗಿದೆ.
ಕರ್ನಾಟಕ ತೊರೆದು ಸೌರಾಷ್ಟ್ರ ಪರ ಆಡುತ್ತಿರುವ ರಾಬಿನ್ ಉತ್ತಪ್ಪ ಅವರು ಮತ್ತೆ ಕರ್ನಾಟಕಕ್ಕೆ ಮರಳಲು ಕೆಪಿಎಲ್ ಸಹಕಾರಿಯಾಗಲಿದೆ.

ಹವಾಮಾನ ವರದಿ
ಪಂದ್ಯಗಳು ಸಂಜೆ 6.30ಕ್ಕೆ ಆರಂಭವಾಗಲಿದ್ದು, ಮಳೆಯ ಭೀತಿ ಇದ್ದೇ ಇದೆ. ಬೆಂಗಳೂರಿನಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಸಾಧಾರಾಣದಿಂದ ಭಾರಿ ಮಳೆ ನಿರೀಕ್ಷಿಸಬಹುದು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೀರು ಇಂಗಿಸುವ ಸೂಪರ್ ವ್ಯವಸ್ಥೆ ಇದ್ದು, ಪಂದ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಕ್ಯೂರೆಟರ್ ನೀಡಿದ್ದಾರೆ.

ಬೆಂಗಳೂರಿನ ಪಿಚ್
ಟಿ20 ಪಂದ್ಯಗಳಲ್ಲಿ ಹೆಚ್ಚೆಚ್ಚು ರನ್ ಸ್ಕೋರ್ ಮಾಡುವ ನಿರೀಕ್ಷೆ ಸಹಜ. ಅದರಲ್ಲೂ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಸ್ಟುವರ್ಟ್ ಬಿನ್ನಿ, ನಿಧೇಶ್, ಪವನ್ ದೇಶಪಾಂಡೆ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಸತತ ಮಳೆ ನಡುವೆಯೂ ಪಿಚ್ ಈಗಲೂ ಬ್ಯಾಟ್ಸ್ ಮನ್ ಸ್ನೇಹಿ ಎನಿಸಿಕೊಂಡಿದೆ. ದಕ್ಷಿಣ ಆಫ್ರಿಕಾ 'ಎ' ಹಾಗೂ ಭಾರತ 'ಎ' ನಡುವಿನ ಪಂದ್ಯಗಳು ಹೆಚ್ಚು ರನ್ ಹೊಳೆ ಹರಿಸಿದ್ದನ್ನು ಸ್ಮರಿಸಬಹುದು. ಬೆಳಗಾವಿ ಹಾಗೂ ಬೆಂಗಳೂರು ಪಂದ್ಯದಲ್ಲೂ ಭಾರಿ ಮೊತ್ತವನ್ನು ನಿರೀಕ್ಷಿಸಬಹುದು.
ತಂಡಗಳು : ಬೆಳಗಾವಿ ಪ್ಯಾಂಥರ್ಸ್
ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ಸ್ಟಾಲಿನ್ ಹೂವರ್, ಅವಿನಾಶ್ ಡಿ, ವಿಷ್ಣು ಪ್ರಿಯನ್, ಅಮನ್ ಖಾನ್, ರಕ್ಷಿತ್ ಎಸ್, ನಿಧೀಶ್ ಎಂ, ನಿಕಿನ್ ಜೋಶ್, ಅಕ್ಷಯ್ ಬಲ್ಲಾಳ್, ಶ್ರೇಯಸ್ ಬಿಎಂ, ಶುಭಾಂಗ್ ಹೆಗ್ಡೆ, ದರ್ಶನ್ ಮಾಚಯ್ಯ, ಸೌರಭ್ ಗೌಡ, ಶರತ್ ಎಚ್.ಎಸ್,
ಬೆಂಗಳೂರು ಬ್ಲಾಸ್ಟರ್ಸ್
ರಾಬಿನ್ ಉತ್ತಪ್ಪ, ವಿಶ್ವನಾಥ್, ಅವಿನಾಶ್, ಕೆಬಿ ಪವನ್, ಗೌರವ್ ಧಿಮಾನ್, ವಿನೀತ್ ಯಾದವ್, ಭರತ್ ದೇವರಾಜ್, ಅರ್ಷ್ ದೀಪ್ ಸಿಂಗ್, ಆನಂದ್ ದೊಡ್ಡಮನಿ, ಮನೋಜ್ ಭಂಡಾಜೆ, ಪಲ್ಲವ್ ಕುಮಾರ್, ಶರಣ್ ಗೌಡ, ಉಳಿಸಿಕೊಂಡ ಆಟಗಾರರು: (ಪೂಲ್ ಎ) ಪವನ್ ದೇಶ್ ಪಾಂಡೆ, ಮಿತ್ರಕಾಂತ್ ಯಾದವ್. (ಪೂಲ್ ಬಿ) ಕೌಶಿಕ್ ವಿ, ಅಭಿಷೇಕ್ ಭಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications