ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ನಡೆಯಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅದ್ಭುತ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ. ಕೃನಾಲ್ ಪಾಂಡ್ಯ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ನಾಲ್ಕು ಓವರ್‍ಗಳಲ್ಲಿ 41 ರನ್ ಗಳಿಸಿತು. ಆದರೆ ಪ್ರಿಯಾಂಶ್ 15 ಎಸೆತಗಳಲ್ಲಿ 22 ರನ್ ಗಳಿಸಿ ಕ್ಯಾಚ್ ಔಟಾದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ಅವರಿಂದ ಬಿಗ್ ಇನ್ನಿಂಗ್ಸ್ ನಿರೀಕ್ಷೆಯಿತ್ತು. ಆದರೆ ಶ್ರೇಯಸ್ ಅಯ್ಯರ್ ನಿರಾಸೆ ಮೂಡಿಸಿದರು.

ಶ್ರೇಯಸ್ ಅಯ್ಯರ್ ಕೆಲವು ಎಸೆತಗಳನ್ನು ಜಾಗರೂಕರಾಗಿ ಎದುರಿಸಿದರು. ಆದರೆ ಎಂಟನೇ ಓವರ್‍ನ ನಾಲ್ಕನೇ ಎಸೆತದಲ್ಲಿ ಅಯ್ಯರ್ ಅವರನ್ನು ರೊಮಾರಿಯಾ ಶೆಫರ್ಡ್ ಔಟ್ ಮಾಡಿದರು. ರೊಮಾರಿಯಾ ಶೆಫರ್ಡ್ ಎಸೆತದಲ್ಲಿ ಬಿಗ್ ಶಾಟ್ ಹೊಡೆಯಲು ಯತ್ನಿಸಿದ ಅಯ್ಯರ್ ವಿಫಲವಾದರು. ಪರಿಣಾಮ ಲಾಂಗ್ ಆನ್‌ನಲ್ಲಿ ನಿಂತಿದ ಕೃನಾಲ್ ಪಾಂಡ್ಯ ಅವರಿಗೆ ಅಯ್ಯರ್ ಕ್ಯಾಚ್ ನೀಡಿದರು. ಕೃನಾಲ್ ಪಾಂಡ್ಯ ಓಡಿ ಬಂದು ಅದ್ಭುತ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದವರು. ಶ್ರೇಯಸ್ ಅಯ್ಯರ್ 10 ಎಸೆತಗಳಲ್ಲಿ 6 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿ ಔಟಾದರು.
ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಪಂಜಾಬ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 159 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
ಆರ್‌ಸಿಬಿ ಪರ ವಿರಾಟ್ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 73 ರನ್ ಗಳಿಸಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ವಿರಾಟ್ ಕೊಹ್ಲಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಅವರನ್ನು ಹೊರತುಪಡಿಸಿ, ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 61 ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಪಂಜಾಬ್ ತಂಡ ಆರ್‌ಸಿಬಿಯನ್ನು ಸೋಲಿಸಿತ್ತು. ಈಗ ಆರ್‌ಸಿಬಿ ಆ ಸೋಲಿಗೆ ಸೇಡು ತೀರಿಸಿಕೊಂಡಿದೆ.