ಲೆಜೆಂಡ್ಸ್ ಲೀಗ್: ಮೈದಾನದಲ್ಲಿಯೇ ಕಣ್ಣೀರಿಟ್ಟ ಇರ್ಫಾನ್ ಪಠಾಣ್; ಕಾರಣವೇನು?

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ನಿವೃತ್ತಿ ಹೊಂದಿರುವಂತಹ ಕ್ರಿಕೆಟಿಗರು ಭಾಗವಹಿಸುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ತನ್ನದೇ ಆದ ರೀತಿಯಲ್ಲಿ ವಿಭಿನ್ನವಾಗಿಯೇ ಸದ್ದು ಮಾಡುತ್ತಿದೆ. ವಿಶ್ವ ಕ್ರಿಕೆಟ್‍ನಲ್ಲಿ ನಿವೃತ್ತಿ ಹೊಂದಿರುವ ಹಲವಾರು ಕ್ರಿಕೆಟಿಗರು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, 3 ತಂಡಗಳು ಕಣಕ್ಕಿಳಿದಿವೆ.
ಹೌದು, ಈ ಬಾರಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂಲಕ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನ ಎಲ್ಲಾ ಮಾಜಿ ಕ್ರಿಕೆಟಿಗರ ಆಟವನ್ನು ಮೈದಾನದಲ್ಲಿ ವೀಕ್ಷಿಸಬಹುದಾದ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಕಿದೆ. ಈ ಬಾರಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಜನವರಿ 20ರಂದು ಆರಂಭವಾಗಿದ್ದು ಇಂದು ( ಜನವರಿ 29 ) ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ. ಇನ್ನು ಈ ಟೂರ್ನಿಯಲ್ಲಿ ಇಂಡಿಯಾ ಮಹಾರಾಜಾಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳು ಭಾಗವಹಿಸಿವೆ. ಇಂಡಿಯಾ ಮಹಾರಾಜಸ್ ತಂಡ ಭಾರತದ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ತಂಡವಾಗಿದ್ದರೆ, ಏಷ್ಯಾ ಲಯನ್ಸ್ ಭಾರತದ ಕ್ರಿಕೆಟಿಗರನ್ನು ಹೊರತುಪಡಿಸಿ ಏಷ್ಯಾ ಖಂಡದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿದೆ ಹಾಗೂ ವರ್ಲ್ಡ್ ಜಿಯಂಟ್ಸ್ ಏಷ್ಯಾ ಖಂಡವನ್ನು ಹೊರತುಪಡಿಸಿ ವಿಶ್ವದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ.
ಇನ್ನು ಈ ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಲೀಗ್ ಹಂತ ಈಗಾಗಲೇ ಮುಕ್ತಾಯವಾಗಿದ್ದು, ಲೀಗ್ ಹಂತದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ವರ್ಲ್ಡ್ ಜಯಂಟ್ಸ್ ಮತ್ತು ಏಷ್ಯಾ ಲಯನ್ಸ್ ತಂಡಗಳು ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಅತ್ತ ಜನವರಿ 27ರಂದು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವರ್ಲ್ಡ್ ಜಯಂಟ್ಸ್ ತಂಡದ ವಿರುದ್ಧ ಸೆಣಸಾಡಿದ ಇಂಡಿಯಾ ಮಹಾರಾಜಾಸ್ ಆ ಪಂದ್ಯದಲ್ಲಿ ಸೋಲುವುದರ ಮೂಲಕ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು. ಈ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಆಟಗಾರರ ಪೈಕಿ ಇರ್ಫಾನ್ ಪಠಾಣ್ ಕೂಡ ಒಬ್ಬರಾಗಿದ್ದರು. ಹೀಗೆ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಇರ್ಫಾನ್ ಪಠಾಣ್ ಪಂದ್ಯದ ವೇಳೆ ಕಣ್ಣೀರು ಹಾಕಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಇರ್ಫಾನ್ ಪಠಾಣ್ ಹೀಗೆ ಮೈದಾನದಲ್ಲಿ ಕಣ್ಣೀರು ಹಾಕಲು ಕಾರಣವೇನು ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ..

ಗೆಲ್ಲುವ ಸನಿಹಕ್ಕೆ ಬಂದು ಔಟ್ ಆಗಿದ್ದಕ್ಕೆ ಇರ್ಫಾನ್ ಪಠಾಣ್ ಕಣ್ಣೀರು
ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸಿದ ಇರ್ಫಾನ್ ಪಠಾಣ್ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಗೆಲ್ಲಲು 12 ಎಸೆತಗಳಿಗೆ 22 ರನ್ ಬೇಕಿದ್ದಾಗ 19ನೇ ಓವರ್‌ನಲ್ಲಿ ಆಲ್ಬಿ ಮಾರ್ಕೆಲ್‌ಗೆ 2 ಅಬ್ಬರದ ಸಿಕ್ಸ್ ಬಾರಿಸಿದರು. ಈ ಮೂಲಕ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಕೊನೆಯ 6 ಎಸೆತಗಳಲ್ಲಿ ಗೆಲ್ಲಲು ಕೇವಲ 8 ರನ್‌ಗಳ ಅಗತ್ಯತೆ ಇತ್ತು. 19ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡಿದ್ದ ಇರ್ಫಾನ್ ಪಠಾಣ್ ಕ್ರೀಸ್ ಕಾಯ್ದುಕೊಂಡಿದ್ದರು. ಈ ಸಂದರ್ಭದಲ್ಲಿ ಅಂತಿಮ ಓವರ್ ಬೌಲಿಂಗ್ ಮಾಡಲು ಬ್ರೆಟ್ ಲೀ ಕಣಕ್ಕಿಳಿದು ಮೊದಲನೇ ಎಸೆತವನ್ನು ವೈಡ್ ಹಾಕಿದರು. ನಂತರ ಆ ಓವರ್‌ನ ಮೊದಲ ಎಸೆತದಲ್ಲಿಯೇ ದೊಡ್ಡ ಹೊಡೆತಕ್ಕೆ ಕೈಹಾಕಿದ ಇರ್ಫಾನ್ ಪಠಾಣ್ ಆಲ್ಬಿ ಮಾರ್ಕೆಲ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಹೀಗೆ ಅಬ್ಬರದ ಬ್ಯಾಟಿಂಗ್ ನಡೆಸಿ ಇನ್ನೇನು ಪಂದ್ಯವನ್ನು ಗೆದ್ದು ಫೈನಲ್ ತಲುಪಬೇಕು ಎನ್ನುವಷ್ಟರಲ್ಲಿ ಔಟ್ ಆದ ಇರ್ಫಾನ್ ಪಠಾಣ್ ಆ ಬೇಸರದ ಜೊತೆಗೆ ತಂಡ ಸೋಲುತ್ತಿರುವುದನ್ನು ಕಂಡು ಪೆವಿಲಿಯನ್‌ನಲ್ಲಿ ಕುಳಿತು ಕಣ್ಣೀರನ್ನು ಹಾಕಿದ್ದಾರೆ.

ಅಂತಿಮ ಹಂತದಲ್ಲಿ ಪಂದ್ಯ ಸೋತ ಇಂಡಿಯಾ ಮಹಾರಾಜಾಸ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವರ್ಲ್ಡ್ ಜಿಯಂಟ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆ ಹಾಕಿತು ಹಾಗೂ ಎದುರಾಳಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ 229 ರನ್‌ಗಳ ಬೃಹತ್ ಗುರಿಯನ್ನು ನೀಡಿತು. 229 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಡಿಯಾ ಮಹಾರಾಜಾಸ್ ತಂಡದ ಪರ ಆರಂಭಿಕ ಆಟಗಾರ ನಮನ್ ಓಜಾ 51 ಎಸೆತಗಳಿಗೆ 95 ರನ್ ಚಚ್ಚಿ ಮಿಂಚಿದರು. ಇನ್ನುಳಿದಂತೆ ವಾಸಿಂ ಜಾಫರ್, ಬದ್ರಿನಾಥ್ ಮತ್ತು ಸ್ಟುವರ್ಟ್ ಬಿನ್ನಿ ಎರಡಂಕಿ ಮುಟ್ಟುವಲ್ಲಿ ವಿಫಲವಾಗಿ ಔಟ್ ಆದರು. ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯೂಸುಫ್ ಪಠಾಣ್ 22 ಎಸೆತಗಳಿಗೆ 45 ರನ್ ಬಾರಿಸಿ ಅಬ್ಬರಿಸಿದರೆ, ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇರ್ಫಾನ್ ಪಠಾಣ್ ಅಂತಿಮ ಓವರ್ ತನಕ ಹೋರಾಟ ನಡೆಸಿ 21 ಎಸೆತಗಳಲ್ಲಿ 56 ರನ್ ಬಾರಿಸಿದರು. ಆದರೆ ಅಂತಿಮ ಓವರ್‌ನ ಮೊದಲನೇ ಎಸೆತದಲ್ಲಿ ಇರ್ಫಾನ್ ಪಠಾಣ್ ಔಟ್ ಆಗಿ ಇಂಡಿಯಾ ಮಹಾರಾಜಾಸ್ ತಂಡ ಗೆಲುವಿನ ಸನಿಹಕ್ಕೆ ಬಂದು ಸೋಲುಂಡಿತು. ಕೊನೆಗೆ ಇಂಡಿಯಾ ಮಹಾರಾಜಾಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಈ ಮೂಲಕ ವರ್ಲ್ಡ್ ಜಿಯಂಟ್ಸ್ ತಂಡ ಈ ರೋಚಕ ಹಣಾಹಣಿಯಲ್ಲಿ 5 ರನ್‌ಗಳ ಗೆಲುವನ್ನು ಸಾಧಿಸಿತು.

ಇರ್ಫಾನ್ ಪಠಾಣ್ ಕಣ್ಣೀರಿಗೆ ನೆಟ್ಟಿಗರ ಸಾಂತ್ವನ
ಇನ್ನು ಇರ್ಫಾನ್ ಪಠಾಣ್ ಕಣ್ಣೀರು ಹಾಕುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದನ್ನು ಕಂಡ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇರ್ಫಾನ್ ಪಠಾಣ್ ಅವರಿಗೆ ಕಾಮೆಂಟ್ ಮೂಲಕ ಸಾಂತ್ವನ ತಿಳಿಸಿದ್ದಾರೆ. ಹಾಗೂ ಮನರಂಜನಾತ್ಮಕ ಉದ್ದೇಶದಿಂದ ನಡೆಯುತ್ತಿರುವಂತಹ ಟೂರ್ನಿಗಳಲ್ಲಿ ತನ್ನ ತಂಡ ಸೋಲುತ್ತಿದೆ ಎಂದು ಕಣ್ಣೀರು ಇಡುತ್ತಿರುವ ಇರ್ಫಾನ್ ಪಠಾಣ್ ಕ್ರಿಕೆಟ್ ಮೇಲೆ ಎಂಥ ರೀತಿಯ ಗೌರವವನ್ನು ಹಾಗೂ ಶ್ರದ್ಧೆಯನ್ನು ಇಟ್ಟುಕೊಂಡಿದ್ದಾರೆ ಎಂದು ನೆಟ್ಟಿಗರು ಇರ್ಫಾನ್ ಪಠಾಣ್ ಕ್ರಿಕೆಟ್ ಪ್ರೀತಿಗೆ ತಲೆಬಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications