'ಆಟದೆಡೆಗಿನ ಪ್ರೀತಿ ವೈಯಕ್ತಿಕ ಸವಾಲುಗಳೆದುರು ಹೋರಾಡಲು ನೆರವಾಯ್ತು'

ಬರ್ಮಿಂಗ್ ಹ್ಯಾಮ್, ಆಗಸ್ಟ್ 2: ಕ್ರಿಕೆಟ್ ಆಟದೆಡೆಗಿನ ಪ್ರೀತಿ, ನನ್ನ ವೈಯಕ್ತಿಕ ಬದುಕಿನ ಸವಾಲುಗಳ ಎದುರು ಹೋರಾಡಲು ನನಗೆ ನೆರವಾಯಿತು ಎಂದು ಭಾರತದ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ. ಕೆಲ ತಿಂಗಳ ಹಿಂದೆ ದಾಂಪತ್ಯ ಜೀವನದಲ್ಲಿನ ಬಿರುಕಿನ ಕುರಿತು ಶಮಿ ಮಾತನಾಡಿದರು.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಗಾಗಿ ಭಾರತ ತಂಡದಲ್ಲಿ ಮರಳಿ ಸ್ಥಾನ ಗಿಟ್ಟಿಸಿಕೊಂಡಿರುವ ಶಮಿ, ಪಂದ್ಯದಲ್ಲಿ ಉತ್ತಮ ಸಾಧನೆಯನ್ನೂ ತೋರಿದ್ದಾರೆ. ಬುಧವಾರ ನಡೆದ ಆರಂಭಿಕ ಪಂದ್ಯದಲ್ಲಿ ಶಮಿ 64 ರನ್ನಿಗೆ 2 ವಿಕೆಟ್ ಕಬಳಿಸಿದ್ದರು. ಭಾರತದ ಮತ್ತೊಬ್ಬ ಬೌಲರ್ ರವಿಚಂದ್ರನ್ ಅಶ್ವಿನ್ ಅವರೂ 4 (60 ರನ್ನಿಗೆ) ಉರುಳಿಸಿ ಆಂಗ್ಲರನ್ನು ಕಾಡಿದ್ದರು. ಹೀಗಾಗಿ ಮೊದಲ ದಿನ ಇಂಗ್ಲೆಂಡ್ 285 ರನ್ ಗೆ 9 ವಿಕೆಟ್ ಕಳೆದುಕೊಂಡಿತ್ತು.
28ರ ಹರೆಯದ ಶಮಿ ಕೆಲ ತಿಂಗಳ ಹಿಂದೆ ದಾಂಪತ್ಯ ಬದುಕಿನ ಸಮಸ್ಯೆ ಎದುರಿಸಿದ್ದರು. ಶಮಿ ಪತ್ನಿ ಹಸೀನ್ ಜಹಾನ್ ಅವರು ಶಮಿಗೆ ಅನೈತಿಕ ಸಂಬಂಧವಿದೆಯೆಂದು ಆರೋಪಿಸಿದ್ದರು. ಇದೇ ವೇಳೆ ಸಣ್ಣ ರಸ್ತೆ ಅಪಘಾತಕ್ಕೂ ಈಡಾಗಿದ್ದ ಶಮಿ ಕೊಂಚ ಕಾಲ ಬಳಲುವಂತಾಗಿತ್ತು. ಹೀಗಾಗಿ ಫಿಟ್ನೆಸ್ ಕಳೆದುಕೊಂಡಿದ್ದ ಶಮಿ ಯೋಯೋ ಟೆಸ್ಟ್ ನಲ್ಲಿ ಫೇಲಾಗಿ ಅಫ್ಘಾನಿಸ್ತಾನ್ ಎದುರಿನ ಪಂದ್ಯದಿಂದ ಹೊರಗುಳಿಯುವಂತಾಗಿತ್ತು.
ಟೆಸ್ಟ್ ಪಂದ್ಯದ ಮೊದಲ ದಿನದಾಂತ್ಯದ ಬಳಿಕ ಮಾತನಾಡಿದ ಶಮಿ, 'ಬಹಳ ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಬೇರೆ ಮಹಿಳೆಯೊಂದಿಗೆ ನಾನು ಸಂಬಂಧ ಹೊಂದಿದ್ದೆ ಎಂಬ ಆರೋಪ ನನ್ನನ್ನು ತಳುಕು ಹಾಕಿಕೊಂಡಿತು. ಈ ಆರೋಪದ ವಿರುದ್ಧ ನಾನು ಹೋರಾಡುತ್ತಲೇ ನನ್ನ ನೆಚ್ಚಿನ ಕ್ರಿಕೆಟ್ ಎಡೆಗೆ ಮರಳಲು ಹರಸಾಹಸ ಪಡುತ್ತಿದ್ದೆ. ಕೊನೆಗೂ ಆಟದೆಡೆಗಿನ ನನ್ನ ಪ್ರೀತಿ ಗೆದ್ದಿತು' ಎಂದರು.
'ಸವಾಲುಗಳು ಏನೇ ಇರಲಿ ನಾನು ಕ್ರಿಕೆಟ್ ನತ್ತ ಮರಳಬೇಕು ಎಂದು ಯೋಚಿಸಿ ಅತ್ತ ಪ್ರಯತ್ನಿಸುತ್ತಲೇ ಇದ್ದೆ. ಎಲ್ಲಕ್ಕಿಂತ ಕ್ರಿಕೆಟ್ ನನಗೆ ಮುಖ್ಯ. ನನ್ನ ತಂಡಕ್ಕಾಗಿ ಆಡಬೇಕು ಎಂದು ಸವಾಲಿನ ಆ ಕ್ಷಣ ಎದುರಲ್ಲಿದ್ದಾಗೆಲ್ಲಾ ಯೋಚಿಸುತ್ತಿದ್ದೆ. ಅದರ ಫಲವಾಗಿಯೇ ಇವತ್ತು ಫಲಿತಾಂಶ ನಿಮ್ಮ ಕಣ್ಣಮುಂದಿದೆ' ಎಂದು ಶಮಿ ಖುಷಿಯಲ್ಲಿ ಭಾವುಕರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications