
ಕೊಲಂಬೋ: ಹಂಬಂಟೋಟದ ಮಹಿಂದ ರಾಜಪಕ್ಸೆ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 27) ನಡೆದ ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್)ನಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದೂ 40ರ ಹರೆಯದಲ್ಲಿ ಅಫ್ರಿದಿ ಬಿರುಸಿನ ಬ್ಯಾಟಿಂಗ್ ನಡೆಸಿರುವುದು ವಿಶೇಷ.
ಶುಕ್ರವಾರ ನಡೆದ ಎಲ್‌ಪಿಎಲ್ 2ನೇ ಪಂದ್ಯದಲ್ಲಿ ಜಾಫ್ನಾ ಸ್ಟಾಲಿಯನ್ಸ್ ಮತ್ತು ಗ್ಯಾಲೆ ಗ್ಲಾಡಿಯೇಟರ್ಸ್ ತಂಡಗಳು ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಗ್ಯಾಲೆ ಗ್ಲಾಡಿಯೇಟರ್ಸ್ ನಾಯಕ ಶಾಹಿದ್ ಅಫ್ರಿದಿ 20 ಎಸೆತಗಳಲ್ಲಿ 50 ರನ್ ಬಾರಿಸಿದ್ದಾರೆ. ಒಟ್ಟು 23 ಎಸೆತಗಳಿಗೆ ಅಫ್ರಿದಿ 58 ರನ್ ಕೊಡುಗೆ ನೀಡಿದ್ದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗ್ಯಾಲೆ ಗ್ಲಾಡಿಯೇಟರ್ಸ್ ನಿಂದ ದನುಷ್ಕ ಗುಣತಿಲಕ 38, ಅಝಾಮ್ ಖಾನ್ 20, ಅಫ್ರಿದಿ 58 ರನ್ ಸೇರಿಸಿದರು. ಗ್ಯಾಲೆ ತಂಡ 20 ಓವರ್‌ಗೆ 8 ವಿಕೆಟ್ ಕಳೆದು 175 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಜಾಫ್ನಾ ಸ್ಟಾಲಿಯನ್ಸ್, ಅವಿಷ್ಕಾ ಫೆರ್ನಾಂಡೋ 92 ರನ್‌ನೊಂದಿಗೆ 19.3 ಓವರ್‌ಗೆ 2 ವಿಕೆಟ್ ಕಳೆದು 176 ರನ್ ಬಾರಿಸಿ 8 ವಿಕೆಟ್ ಗೆಲುವನ್ನಾಚರಿಸಿತು.
'ಬೂಮ್ ಬೂಮ್ ಅಫ್ರಿದಿ' ಎಂದು ಕರೆಯಲ್ಪಡುತ್ತಿದ್ದ ಆಲ್ ರೌಂಡರ್ ಶಾಹಿದ್, 27 ಟೆಸ್ಟ್ ಪಂದ್ಯಗಳಲ್ಲಿ 1716 ರನ್, 48 ವಿಕಟ್, 398 ಏಕದಿನ ಪಂದ್ಯಗಳಲ್ಲಿ 8064 ರನ್, 395 ವಿಕೆಟ್‌ಗಳು, 99 ಟಿ20ಐ ಪಂದ್ಯಗಳಲ್ಲಿ 1416 ರನ್, 98 ವಿಕೆಟ್, 10 ಐಪಿಎಲ್ ಪಂದ್ಯಗಳಲ್ಲಿ 81 ರನ್, 9 ವಿಕೆಟ್ ಪಡೆದಿದ್ದಾರೆ.