ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು 2024ರ 17ನೇ ಆವೃತ್ತಿಯ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಲೋಕಸಭೆ ಚುನಾವಣೆಯ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್‌ನ 2024ರ ಆವೃತ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
41 ವರ್ಷದ ಗೌತಮ್ ಗಂಭೀರ್ ಅವರು ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಹೀಗಾಗಿ, ಅವರು 2024ರ ಐಪಿಎಲ್ ಸಮಯದಲ್ಲಿ ವಿಪರೀತ ವೇಳಾಪಟ್ಟಿಯನ್ನು ಹೊಂದಿರುತ್ತಾರೆ.

ಆದಾಗ್ಯೂ ವರದಿಗಳ ಪ್ರಕಾರ, ಭಾರತೀಯ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯಿಂದ ಬೇರೆಯಾಗುವುದಿಲ್ಲ. ಆದರೆ ತಮ್ಮ ರಾಜಕೀಯ ಜವಾಬ್ದಾರಿಗಳ ಮೇಲೆ ಕೇಂದ್ರೀಕರಿಸಲು ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.
ಇದೇ ವೇಳೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಜಸ್ಟಿನ್ ಲಾಂಗರ್ ನೇಮಕಗೊಂಡ ನಂತರ, ಗೌತಮ್ ಗಂಭೀರ್ ಅವರು ಫ್ರಾಂಚೈಸಿಯನ್ನು ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಸೇರುವ ಬಗ್ಗೆ ವರದಿಗಳು ಬಂದಿದ್ದವು.
ಈ ಕುರಿತು ಮೂಲವೊಂದು ಇತ್ತೀಚೆಗೆ ಅನುಮಾನವನ್ನು ಸ್ಪಷ್ಟಪಡಿಸಿದ್ದು, ಗೌತಮ್ ಗಂಭೀರ್ ಮುಂದಿನ ವರ್ಷದ ಐಪಿಎಲ್‌ನಿಂದ ಹೊರಗುಳಿಯಲು ಏಕೆ ನಿರ್ಧರಿಸಿದ್ದಾರೆ ಎಂದು ಹೇಳಿದೆ.

"ಹೌದು, ಗೌತಮ್ ಗಂಭೀರ್ ಮುಂದಿನ ಐಪಿಎಲ್‌ಗೆ ರಾಜಕೀಯ ಬದ್ಧತೆಗಳಿಗೆ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅವರು ಬೇರೆ ತಂಡಕ್ಕೆ ಹೋಗುತ್ತಿಲ್ಲ ಅಥವಾ ಫ್ರಾಂಚೈಸಿಯನ್ನು ತೊರೆಯುತ್ತಿಲ್ಲ. ಲೋಕಸಭೆ ಚುನಾವಣೆಯ ಸಮಯದಲ್ಲಿ ಸಾಕಷ್ಟು ರಾಜಕೀಯ ಕೆಲಸಗಳು ಒಳಗೊಂಡಿರುತ್ತವೆ. ಆದ್ದರಿಂದ ಅವರು ತಮ್ಮ ಎಲ್ಲಾ ಶಕ್ತಿಯನ್ನು ಆ ಕಡೆಗೆ ಕೇಂದ್ರೀಕರಿಸಲು ಬಯಸುತ್ತಾರೆ," ಎಂದು ಮೂಲಗಳು ತಿಳಿಸಿವೆ.
ಗಮನಾರ್ಹವಾಗಿ, ಗೌತಮ್ ಗಂಭೀರ್ ಐಪಿಎಲ್‌ನ 2022ರ ಆವೃತ್ತಿಗೆ ಮುಂಚಿತವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡರು. ಅವರ ಮಾರ್ಗದರ್ಶನದಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಫ್ರಾಂಚೈಸಿ ಎರಡೂ ಸಂದರ್ಭಗಳಲ್ಲಿ ಪ್ಲೇಆಫ್‌ಗೆ ಅರ್ಹತೆ ಗಳಿಸಿತು, ಆದರೆ ಫೈನಲ್ ತಲುಪಲು ವಿಫಲವಾಗಿದೆ.
ಹೀಗಾಗಿ, ಲಕ್ನೋ ಸೂಪರ್ ಜೈಂಟ್ಸ್ ಇತ್ತೀಚೆಗೆ ಮಾಜಿ ಮುಖ್ಯ ಕೋಚ್ ಆಂಡಿ ಫ್ಲವರ್ ಅವರನ್ನು ತೆರವುಗೊಳಿಸಿ, ಅವರ ಸ್ಥಾನಕ್ಕೆ ಜಸ್ಟಿನ್ ಲ್ಯಾಂಗರ್‌ರನ್ನು ನೇಮಿಸಿತು. ಅಲ್ಲದೆ ತಮ್ಮ ತಂಡದ ಕಾರ್ಯತಂತ್ರ ಸಲಹೆಗಾರರಾಗಿ ಎಂಎಸ್‌ಕೆ ಪ್ರಸಾದ್ ಅವರನ್ನು ಸಹ ನೇಮಕ ಮಾಡಿದೆ.
ಮತ್ತೊಂದೆಡೆ, 2024ರ ಐಪಿಎಲ್ ಸಂಪೂರ್ಣ ಆವೃತ್ತಿಯು ಲೋಕಸಭೆ ಚುನಾವಣೆಯ ಕಾರಣದಿಂದಾಗಿ ಭಾರತದಲ್ಲಿ ನಡೆಯುವ ಸಾಧ್ಯತೆ ಕಡಿಮೆ. 2009ರಲ್ಲಿ ಐಪಿಎಲ್ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿತು. ಆದರೆ 2014ರಲ್ಲಿ ಮೊದಲಾರ್ಧವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಡಲಾಯಿತು.
ನಂತರ 2019ರಲ್ಲಿ ಇಡೀ ಐಪಿಎಲ್ ಪಂದ್ಯಾವಳಿಯನ್ನು ಚುನಾವಣಾ ಪ್ರಕ್ರಿಯೆಗೆ ಅಡ್ಡಿಯಾಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ಮುಂದಿನ ವರ್ಷವೂ ಅದೇ ಪುನರಾವರ್ತನೆಯಾಗಬಹುದು, ಆದರೆ ಇಲ್ಲಿಯವರೆಗೆ ಯಾವುದೂ ದೃಢಪಟ್ಟಿಲ್ಲ. ಎಲ್ಲರ ಕಣ್ಣುಗಳು ಇದೀಗ 2023ರ ಏಕದಿನ ವಿಶ್ವಕಪ್ ಕಡೆ ನೆಟ್ಟಿವೆ.