ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್‌ಸಿಬಿ ವಿರುದ್ಧದ ಪಂದ್ಯದ ಮುಕ್ತಾಯದ ಬಳಿಕ ನಡೆದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ಮಾತಿನ ಚಕಮಕಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಭಾರತೀಯ ಕ್ರಿಕೆಟ್‌ನ ದಿಗ್ಗಜರರಿಬ್ಬರ ನಡುವಿನ ಈ ವಾಕ್ಸಮರಕ್ಕೆ ಸಾಕಷ್ಟು ಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ. ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪ್ರತಿಕ್ರಿಯೆ ನೀಡಿದ್ದು ಒಟ್ಟಾರೆಯ ಘಟನೆಯ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಮುಕ್ತಾಯದ ಬಳಿಕ ಎರಡು ತಂಡಗಳ ಆಟಗಾರರು ಹಸ್ತಲಾಘವ ಮಾಡುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಈ ಘಟನೆ ನಡೆಯಿತು. ಈ ವಿಚಾರವಾಹಗಿ ಮಾತನಾಡಿದ ಅನಿಲ್ ಕುಂಬ್ಳೆ ಕ್ರಿಕೆಟ್ ಆಟಕ್ಕೆ ನೀಡಿದ ಅಗೌರವ್ ಎಂದಿದ್ದಾರೆ. ಆಟಗಾರರಿಬ್ಬರು ಪರಸ್ಪರ ಗೌರವ ನೀಡದ ಹೊರತು ಕ್ರಿಕೆಟ್ ಆಟಕ್ಕೆ ಗೌರವ ನೀಡಲು ಸಾಧ್ಯವಿಲ್ಲ ಎಂದು ಅನಿಲ್ ಕುಂಬ್ಳೆಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ತನ್ನ ನಿಲುವು ಕ್ರಿಕೆಟ್ ಆಟದ ಪರ ಎಂಬ ಸಂದೇಶ ರವಾನಿಸಿದ್ದಾರೆ.

"ಪಂದ್ಯದ ಸಂದರ್ಭದಲ್ಲಿ ಸಾಕಷ್ಟು ಭಾವನೆಗಳು ಒಳಗೆ ಆಗುತ್ತಿರುತ್ತದೆ. ಆದರೆ ಅದೆಲ್ಲವನ್ನೂ ವ್ಯಕ್ತಪಡಿಸಬಾರದು. ಖಂಡಿತವಾಗಿಯೂ ಮಾತುಕತೆಗಳನ್ನು ನಡೆಸಬೇಕು. ಆದರೆ ಈ ರೀತಿಯ ಘಟನೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏನೇ ಆಗಿರಲಿ, ನಿಮ್ಮ ಎದುರಾಳಿಯನ್ನು ನೀವು ಗೌರವಿಸಬೇಕು. ನೀವು ಆಟಕ್ಕೆ ಗೌರವ ನೀಡಬೇಕು" ಎಂದಿದ್ದಾರೆ ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ.
"ಮೈದಾನದಲ್ಲಿ ಕೆಲ ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಬರಬಹುದು. ಎದುರಾಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಬಹುದು. ಈ ಬಿಸಿ ವಾತಾವರಣದಲ್ಲಿ ಪರಸ್ಪರ ಮಾತಿನ ಚಕಮಕಿಗಳು ನಡೆಯಬಹುದು. ಆದರೆ ಒಮ್ಮೆ ಪಂದ್ಯ ಮುಕ್ತಾಯವಾಯಿತು ಎಂದರೆ ಪರಸ್ಪರ ಹಸ್ತಲಾಘವ ಮಾಡಿಕೊಂಡು ಗೌರವ ನೀಡಬೇಕು. ಆಟಗಾರನಿಗಾಗಿ ಅಲ್ಲ, ಅದು ಕ್ರಿಕೆಟ್ ಆಟಕ್ಕಾಗಿ. ಯಾಕೆಂದರೆ ನೀವು ಗೌರವ ನೀಡಬೇಕಿರುವುದು ಆಟಕ್ಕೆ. ಅವರು ಏನು ಹೇಳಿದರು ಎಂಬುದು ನನಗೆ ತಿಳಿದಿಲ್ಲ. ಅದು ವೈಯಕ್ತಿಕವೂ ಆಗಿರಬಹುದು. ಆದರೆ ಅದನ್ನು ನೀವು ಇದನ್ನೆಲ್ಲಾ ಕ್ರಿಕೆಟ್ ಮೈದಾನದಲ್ಲಿ ನಡೆಯಲು ಅವಕಾಶ ನೀಡಬಾರದು. ವಿರಾಟ್ ಕೊಹ್ಲಿ ಅಥವಾ ಗೌತಮ್ ಗಂಭೀರ್ ಇನ್ನು ಯಾರೇ ಭಾಗಿಯಾಗಿದ್ದರೂ ಇಂಥಾದ್ದನ್ನು ನೋಡಲು ಇಷ್ಟ ಪಡುವುದುದಿಲ್ಲ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ.
ಗಂಭೀರ್ ಹಾಗೂ ವಿರಾಟ್ ಕೊಹ್ಲಿಗೆ ದಂಡ
ಇನ್ನು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್‌ಸಿಬಿ ವಿರುದ್ಧದ ಪಂದ್ಯದ ಮುಕ್ತಾಯದ ಬಳಿಕ ಮಾತಿನ ಚಕಮಕಿ ನಡೆಸಿದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಇಬ್ಬರಿಗೂ ಐಪಿಎಲ್ ನೀತಿಸಂಹಿತೆಯ ಅಡಿಯಲ್ಲಿ ದಂಡದ ಶಿಕ್ಷೆ ನೀಡಲಾಗಿದೆ. ಇಬ್ಬರು ಕೂಡ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ಅಡಿಯಲ್ಲಿ ಲೆವೆಲ್-2 ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ ಶೇಕಡಾ 100ರಷ್ಟು ದಂಡದ ಶಿಕ್ಷೆಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದೆ.
ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ
ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಅಮೋಘ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಾಗದೆ ಕೇವಲ 126 ರನ್‌ಗಳನ್ನು ಗಳಿಸಿದ ಆರ್‌ಸಿಬಿ ತಂಡ ಬಳಿಕ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಎದುರಾಳ ಎಲ್‌ಎಸ್‌ಜಿ ತಂಡವನ್ನು ಆರ್‌ಸಿಬಿ ಕೇವಲ 108 ರನ್‌ಗಳಿಗೆ ಆಲೌಟ್ ಮಾಡಿದ್ದು 18 ರನ್‌ಗಳ ಅಂತರದಿಂದ ಪಂದ್ಯದಲ್ಲಿ ಗೆಲುವು ಸಾಧಿಸಿದೆ.