ಮಹಾರಾಜ ಟ್ರೋಫಿ: ಮಯಾಂಕ್ ಅಬ್ಬರದ ಶತಕಕ್ಕೆ ಮನೀಶ್ ತಂಡ ಉಡೀಸ್; ಬೆಂಗಳೂರು ಫೈನಲ್‌ಗೆ!

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿಯ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ 44 ರನ್‌ಗಳ ಭರ್ಜರಿ ಗೆಲುವು ಕಂಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ನಾಯಕ ಮನೀಶ್ ಪಾಂಡೆ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿ ಎದುರಾಳಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೆ 228 ರನ್‌ಗಳ ಬೃಹತ್ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ 18.2 ಓವರ್‌ಗಳಲ್ಲಿ 183 ರನ್ ಕಲೆಹಾಕಿ ಆಲ್ ಔಟ್ ಆಗಿದ್ದು ಸೋಲುಂಡಿದೆ. ಇನ್ನು ಈ ಪಂದ್ಯದಲ್ಲಿ ಗೆದ್ದಿರುವ ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ನೇರವಾಗಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದು, ಸೋಲುಂಡ ಗುಲ್ಬರ್ಗಾ ಮಿಸ್ಟಿಕ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ. ಅತ್ತ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದಿರುವ ಮೈಸೂರು ವಾರಿಯರ್ಸ್ ಹಾಗೂ ಈ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತಿರುವ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಆಗಸ್ಟ್ 25ರ ಗುರುವಾರದಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು ಫೈನಲ್ ಪಂದ್ಯದ ಪ್ರವೇಶಕ್ಕಾಗಿ ಸೆಣಸಾಡಲಿವೆ.

ಬೆಂಗಳೂರು ಬ್ಲಾಸ್ಟರ್ಸ್ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ಪರ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಎಲ್ ಆರ್ ಚೇತನ್ ಆರಂಭಿಕರಾಗಿ ಕಣಕ್ಕಿಳಿದರು. 15.2 ಓವರ್‌ಗಳಲ್ಲಿ 162 ರನ್‌ಗಳ ಜತೆಯಾಟವನ್ನಾಡಿದ ಈ ಜೋಡಿ ಭರ್ಜರಿ ಆರಂಭವನ್ನು ಕಟ್ಟಿಕೊಟ್ಟಿತು. ಎಲ್ ಆರ್ ಚೇತನ್ 48 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 80 ರನ್ ಚಚ್ಚಿದರೆ, ನಾಯಕ ಮಯಾಂಕ್ ಅಗರ್ವಾಲ್ 61 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 112 ರನ್ ಕಲೆಹಾಕಿದರು. ಇನ್ನುಳಿದಂತೆ ಅನಿರುದ್ಧಾ ರಕ್ಷಿತ್ 20 ರನ್, ಶಿವಕುಮಾರ್ ರಕ್ಷಿತ್ 7 ರನ್ ಹಾಗೂ ಜಗದೀಶ ಸುಚಿತ್ ಔಟ್ ಆಗದೇ 1 ರನ್ ಕಲೆಹಾಕಿದರು.
ಗುಲ್ಬರ್ಗಾ ಮಿಸ್ಟಿಕ್ಸ್ ಪರ ವಿಧ್ವತ್ ಕಾವೇರಪ್ಪ ಎರಡು ವಿಕೆಟ್ ಹಾಗೂ ಅಜಯ್ ಗೌಡ ಒಂದು ವಿಕೆಟ್ ಪಡೆದದ್ದು ಬಿಟ್ಟರೆ ಉಳಿದ ಯಾವುದೇ ಬೌಲರ್ ಕೂಡ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಇನ್ನು ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಬೌಲರ್‌ಗಳು ಕನಿಷ್ಟ 7.50 ಹಾಗೂ ಗರಿಷ್ಠ 14.80ರ ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ್ದು, ಕೆಟ್ಟ ಪ್ರದರ್ಶನ ನೀಡಿದರು.

ಗುಲ್ಬರ್ಗಾ ಮಿಸ್ಟಿಕ್ಸ್ ಇನ್ನಿಂಗ್ಸ್
ಇನ್ನು ಬೆಂಗಳೂರು ವಾರಿಯರ್ಸ್ ನೀಡಿದ ಬೃಹತ್ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಗುಲ್ಬರ್ಗಾ ಮಿಸ್ಟಿಕ್ಸ್ ಪರ ರೋಹನ್ ಪಾಟೀಲ್ ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರ ಕೂಡ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹನ್ ಪಾಟೀಲ್ 49 ಎಸೆತಗಳಲ್ಲಿ 10 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 108 ರನ್ ಚಚ್ಚಿ ಅಬ್ಬರಿಸಿದರು. ಹಾಗೂ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಮತ್ತೋರ್ವ ಆರಂಭಿಕ ಆಟಗಾರ ಜೆಸ್ವಂತ್ ಆಚಾರ್ಯ 12 ರನ್ ಕಲೆಹಾಕಿದರು. ಇನ್ನುಳಿದಂತೆ ಕೃಷ್ಣನ್ ಶ್ರೀಜಿತ್ 7 ರನ್, ನಾಯಕ ಮನೀಶ್ ಪಾಂಡೆ 5 ರನ್, ಮನೋಜ್ ಭಂಡಾಗೆ 26 ರನ್, ರಿತೇಶ್ ಭಟ್ಕಳ್ 3 ರನ್, ಅಜಯ್ ಗೌಡ 4 ರನ್, ಪ್ರಣವ್ ಭಾಟಿಯಾ 14 ರನ್, ಕುಶಾಲ್ ವಾಧ್ವಾನಿ 2 ರನ್, ವಿಧ್ವತ್ ಕಾವೇರಪ್ಪ ಶೂನ್ಯ ಹಾಗೂ ಧನುಷ್ ಗೌಡ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಹೀಗೆ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಅಬ್ಬರದ ಶತಕ ಸಿಡಿಸಿದ ರೋಹನ್ ಪಾಟೀಲ್ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ ಉಳಿದ ಯಾವುದೇ ಆಟಗಾರ ಕೂಡ ಉತ್ತಮ ಆಟವನ್ನಾಡಲಿಲ್ಲ ಹಾಗೂ ರೋಹನ್ ಪಾಟೀಲ್‌ಗೆ ಸರಿಯಾದ ಸಾಥ್ ನೀಡಲಿಲ್ಲ.
ಬೆಂಗಳೂರು ಬ್ಲಾಸ್ಟರ್ಸ್ ಪರ ರೋನಿತ್ ಮೋರೆ 3 ವಿಕೆಟ್ ಪಡೆದರೆ, ಜಗದೀಶ ಸುಚಿತ್ 2 ವಿಕೆಟ್ ಹಾಗೂ ಸಂತೋಕ್ ಸಿಂಗ್ ಮತ್ತು ಪ್ರದೀಪ್ ಟಿ ತಲಾ ಒಂದೊಂದು ವಿಕೆಟ್ ಪಡೆದರು.

ಆಡುವ ಬಳಗಗಳು
ಬೆಂಗಳೂರು ಬ್ಲಾಸ್ಟರ್ಸ್ ಆಡುವ ಬಳಗ: ಮಯಾಂಕ್ ಅಗರ್ವಾಲ್ (ನಾಯಕ), ಎಲ್ ಆರ್ ಚೇತನ್, ಕುಶ್ ಮರಾಠೆ, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಅನಿರುದ್ಧ ಜೋಶಿ, ಜಗದೀಶ ಸುಚಿತ್, ಕ್ರಾಂತಿ ಕುಮಾರ್, ರಿಷಿ ಬೋಪಣ್ಣ, ರೋನಿತ್ ಮೋರೆ, ಪ್ರದೀಪ್ ಟಿ, ಸಂತೋಕ್ ಸಿಂಗ್
ಗುಲ್ಬರ್ಗಾ ಮಿಸ್ಟಿಕ್ಸ್ ಆಡುವ ಬಳಗ: ರೋಹನ್ ಪಾಟೀಲ್, ಜೆಸ್ವತ್ ಆಚಾರ್ಯ, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪ್), ಮನೀಶ್ ಪಾಂಡೆ (ನಾಯಕ), ಮನೋಜ್ ಭಾಂಡಗೆ, ಅಜಯ್ ಗೌಡ, ರಿತೇಶ್ ಭಟ್ಕಳ್, ಕುಶಾಲ್ ವಾಧ್ವಾನಿ, ಪ್ರಣವ್ ಭಾಟಿಯಾ, ವಿಧ್ವತ್ ಕಾವೇರಪ್ಪ, ಧನುಷ್ ಗೌಡ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications