ಮಹಾರಾಜ ಟ್ರೋಫಿ: ಮನೀಶ್ ಅರ್ಧಶತಕ, ಶಿವಮೊಗ್ಗಕ್ಕೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದ ಗುಲ್ಬರ್ಗಾ

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮಹಾರಾಜ ಟ್ರೋಫಿಯನ್ನು ಆಯೋಜಿಸಿದ್ದು, ಇದು ಈ ಹಿಂದೆ ನಡೆಯುತ್ತಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ಆಯೋಜನೆಗೊಂಡಿದೆ. ಈ ಮಹಾರಾಜ ಟಿ ಟ್ವೆಂಟಿ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಸ್ಟ್ರೈಕರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮಂಗಳೂರು ಯುನೈಟೆಡ್ ಹೀಗೆ ಒಟ್ಟು ಆರು ತಂಡಗಳು ಭಾಗವಹಿಸಿದ್ದು, ಟ್ರೋಫಿಗಾಗಿ ಸೆಣಸಾಟ ನಡೆಸುತ್ತಿವೆ.
ಟೂರ್ನಿಯಲ್ಲಿ ಲೀಗ್, ಎಲಿಮಿನೇಟರ್, ಕ್ವಾಲಿಫೈಯರ್ ಹಾಗೂ ಫೈನಲ್ ಸುತ್ತುಗಳ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದ್ದು, ಲೀಗ್ ಸುತ್ತಿನ ಪಂದ್ಯಗಳು ಇದೇ ಆಗಸ್ಟ್ 7ರ ಭಾನುವಾರದಿಂದ ಆರಂಭಗೊಂಡಿವೆ. ಇನ್ನು ಇಂದು ( ಆಗಸ್ಟ್ 9 ) ಎರಡು ಪಂದ್ಯಗಳು ಆಯೋಜನೆಗೊಂಡಿದ್ದು, ದಿನದ ಮೊದಲ ಪಂದ್ಯ ಹಾಗೂ ಟೂರ್ನಿಯ ಐದನೇ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಿವೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮನೀಶ್ ಪಾಂಡೆ ನಾಯಕತ್ವದ ಗುಲ್ಬರ್ಗಾ ಮಿಸ್ಟಿಕ್ಸ್ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

ಶಿವಮೊಗ್ಗ ಸ್ಟ್ರೈಕರ್ಸ್ ಇನ್ನಿಂಗ್ಸ್
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ನಾಯಕ ಕೃಷ್ಣಪ್ಪ ಗೌತಮ್ ಬ್ಯಾಟಿಂಗ್ ಆಯ್ದುಕೊಂಡರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹನ್ ಕದಮ್ 53 ರನ್ ಗಳಿಸಿ ಮಿಂಚಿದರೆ, ಮತ್ತೋರ್ವ ಆರಂಭಿಕ ಆಟಗಾರ ಸ್ಟಾಲಿನ್ ಹೂವರ್ ಗೋಲ್ಡನ್ ಡಕ್ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಕೃಷ್ಣಮೂರ್ತಿ ಸಿದ್ಧಾರ್ಥ್ ಸಹ 53 ಕಲೆಹಾಕಿದರು ಹಾಗೂ ಆರಂಭಿಕ ಆಘಾತ ಅನುಭವಿಸಿದ್ದ ತಂಡಕ್ಕೆ ಸಿದ್ಧಾರ್ಥ್ ಮತ್ತು ರೋಹನ್ ಕದಮ್ ಜೋಡಿ 108 ರನ್‌ಗಳ ಜತೆಯಾಟವನ್ನಾಡಿತು. ಇನ್ನುಳಿದಂತೆ ವಿಕೆಟ್ ಕೀಪರ್ ಶರತ್ ಬಿಆರ್ 9 ರನ್, ಸಮರ್ಥ್ ಆರ್ 3 ರನ್, ನಾಯಕ ಕೃಷ್ಣಪ್ಪ ಗೌತಮ್ 6 ಎಸೆತಗಳಲ್ಲಿ 23 ರನ್, ಅವಿನಾಶ್ ಡಿ 9 ಎಸೆತಗಳಲ್ಲಿ 20 ರನ್, ಉತ್ತಮ್ ಅಯ್ಯಪ್ಪ ಗೋಲ್ಡನ್ ಡಕ್‌ಔಟ್ ಹಾಗೂ ರಾಜ್‌ವೀರ್ ಮಧ್ವ ಅಜೇಯ 1 ರನ್ ಕಲೆಹಾಕಿದರು. ಈ ಮೂಲಕ ಶಿವಮೊಗ್ಗ ಸ್ಟ್ರೈಕರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ಎದುರಾಳಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೆ 176 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತ್ತು.
ಗುಲ್ಬರ್ಗಾ ಮಿಸ್ಟಿಕ್ಸ್ ಪರ ಕಾರ್ತಿಕ್ ಸಿಎ 3 ವಿಕೆಟ್, ವಿದ್ವತ್ ಕಾವೇರಪ್ಪ 2 ವಿಕೆಟ್ ಹಾಗೂ ಮನೋಜ್ ಭಂಡಾಗೆ ಮತ್ತು ಕೃಷ್ಣ ಶ್ರೀಜಿತ್ ತಲಾ ಒಂದೊಂದು ವಿಕೆಟ್ ಪಡೆದರು.

ಚೇಸ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್
ಇತ್ತ ಶಿವಮೊಗ್ಗ ಸ್ಟ್ರೈಕರ್ಸ್ ನೀಡಿದ ಪೈಪೋಟಿಯುತ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಜಸ್ವಂತ್ ಆಚಾರ್ಯ 30 ರನ್ ಗಳಿಸಿ ಮಿಂಚಿದರೆ, ದೇವದತ್ ಪಡಿಕ್ಕಲ್ ಕೇವಲ 9 ರನ್ ಕಲೆಹಾಕಿ ಟೂರ್ನಿಯ ತಮ್ಮ ಎರಡನೇ ಪಂದ್ಯದಲ್ಲಿಯೂ ನಿರಾಸೆ ಮೂಡಿಸಿದರು. ಇನ್ನುಳಿದಂತೆ ರೋಹನ್ ಪಾಟೀಲ್ 28 ರನ್, ನಾಯಕ ಮನೀಶ್ ಪಾಂಡೆ 50 ರನ್, ಕೃಷ್ಣ ಶ್ರೀಜಿತ್ 15 ರನ್, ಮನೋಜ್ ಭಂಡಾಗೆ 6 ರನ್ ಹಾಗೂ ಬೆಂಗಳೂರು ಮೋಹಿತ್ 1 ರನ್ ಕಲೆಹಾಕಿದರು. ಅಂತಿಮವಾಗಿ ಅಬ್ಬರಿಸಿದ ಕಾರ್ತಿಕ್ ಸಿಎ 9 ಎಸೆತಗಳಲ್ಲಿ ಅಜೇಯ 22 ರನ್ ಹಾಗೂ ರಿತೇಶ್ ಭಟ್ಕಳ್ ಅಜೇಯ 9 ರನ್ ಕಲೆಹಾಕಿ ತಂಡವನ್ನು ಐದು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿದರು. ಈ ಮೂಲಕ ಗುಲ್ಬರ್ಗಾ ಮಿಸ್ಟಿಕ್ಸ್ 19.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸಿ 3 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಗುಲ್ಬರ್ಗಾ ಮಿಸ್ಟಿಕ್ಸ್ ಪರ ಅರ್ಧಶತಕ ಬಾರಿಸಿ ಅಬ್ಬರಿಸಿದ ನಾಯಕ ಮನೀಶ್ ಪಾಂಡೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆಡುವ ಬಳಗಗಳು
ಗುಲ್ಬರ್ಗಾ ಮಿಸ್ಟಿಕ್ಸ್: ಕೋದಂಡ ಅಜಿತ್ ಕಾರ್ತಿಕ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ (ನಾಯಕ), ಕೃಷ್ಣನ್ ಶ್ರೀಜಿತ್, ಬೆಂಗಳೂರು ಮೋಹಿತ್ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ರಿತೇಶ್ ಭಟ್ಕಳ್, ಪ್ರಣವ್ ಭಾಟಿಯಾ, ರೋಹನ್ ಪಾಟೀಲ್, ಜೇಸ್ವತ್ ಆಚಾರ್ಯ, ವಿಧ್ವತ್ ಕಾವೇರಪ್ಪ
ಶಿವಮೊಗ್ಗ ಸ್ಟ್ರೈಕರ್ಸ್: ರೋಹನ್ ಕದಮ್, ಸ್ಟಾಲಿನ್ ಹೂವರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಸ್ಮರಣ್ ಆರ್, ಕೃಷ್ಣಪ್ಪ ಗೌತಮ್ (ನಾಯಕ), ಶರತ್ ಬಿಆರ್ (ವಿಕೆಟ್ ಕೀಪರ್), ಅವಿನಾಶ್ ಡಿ, ರಾಜವೀರ್ ವಾಧ್ವಾ, ಎಂ ಬಿ ದರ್ಶನ್, ಕೆ ಸಿ ಕಾರಿಯಪ್ಪ, ಉತ್ತಮ್ ಅಯ್ಯಪ್ಪ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications