Maharaja Trophy 2023: ಮನೀಶ್ ಪಾಂಡೆ, ತಾಹ ಅರ್ಧಶತಕ; ಮಂಗಳೂರು ವಿರುದ್ಧ ಹುಬ್ಬಳ್ಳಿ ಟೈಗರ್ಸ್‌ಗೆ ಗೆಲುವು
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯು ಅಂತಿಮ ಹಂತಕ್ಕೆಕ್ಕೆ ತಲುಪುತ್ತಿದೆ ಮತ್ತು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಶನಿವಾರ, ಆಗಸ್ಟ್ 26ರಂದು ನಡೆದ 27ನೇ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ತಂಡದ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ತಂಡವು 5 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿತು.
ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದರೆ, ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಕೃಷ್ಣಪ್ಪ ಗೌತಮ್ ನಾಯಕತ್ವದ ಮಂಗಳೂರು ಡ್ರಾಗನ್ಸ್ ತಂಡ ಮತ್ತೆ ಸೋಲಿನ ಕಡೆ ಸಾಗಿತು.

ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಡ್ರಾಗನ್ಸ್ ತಂಡ ಸಿದ್ಧಾರ್ಥ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್‌ಗಳನ್ನು ಕಲೆಹಾಕಿತು.
168 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡ 18.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 170 ರನ್ ಗಳಿಸುವ ಮೂಲಕ ಇನ್ನೂ 10 ಎಸೆತಗಳು ಮತ್ತು 5 ವಿಕೆಟ್‌ಗಳು ಉಳಿದಿರುವಂತೆ ಭರ್ಜರಿ ಗೆಲುವು ದಾಖಲಿಸಿತು. ಅಲ್ಲದೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ಮಂಗಳೂರು ಡ್ರಾಗನ್ಸ್ ತಂಡದ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕರಾದ ಶರತ್ ಬಿಆರ್ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 40 ರನ್ ಗಳಿಸಿದರೆ, ರೋಹನ್ ಪಾಟೀಲ್ 26 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 34 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.

ಬಳಿಕ ಬಂದ ಸಿದ್ಧಾರ್ಥ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 53 ರನ್ ಬಾರಿಸಿದರೆ, ತಿಪ್ಪಾರೆಡ್ಡಿ 19 ರನ್, ಅನಿರುದ್ಧ್ ಜೋಶಿ 6 ರನ್, ಕೃಷ್ಣಪ್ಪ ಗೌತಮ್ 5 ರನ್, ನವೀನ್ ಎಂಜಿ 1 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಮನ್ವಂತ್ ಕುಮಾರ್ 4 ಓವರ್‌ಗಳಲ್ಲಿ 33 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರು. ಉಳಿದಂತೆ ಲಾವಿಶ್ ಕೌಶಲ್ 2 ವಿಕೆಟ್ ಕಬಳಿಸಿದರೆ, ಪ್ರವೀಣ್ ದುಬೆ ಒಂದು ಪಡೆದರು.
168 ರನ್‌ಗಳ ಚೇಸಿಂಗ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಆರಂಭಿಕರಾದ ನಾಗ ಭರತ್ 14 ರನ್ ಗಳಿಸಿದರೆ, ಮೊಹಮ್ಮದ್ ತಾಹ 23 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿದರು. ನಂತರ ಬಂದ ಕೃಷ್ಣನ್ ಶ್ರೀಜಿತ್ 4 ರನ್ ಗಳಿಸಿ ನಿರಾಸೆ ಮೂಡಿಸಿದರು.
ಬಳಿಕ ನಾಯಕ ಮನೀಶ್ ಪಾಂಡೆ 33 ಎಸೆತಗಳಲ್ಲಿ 1 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳ ಮೂಲಕ ಅಜೇಯ 56 ರನ್ ಗಳಿಸಿದರು. ಪ್ರವಿಣ್ ದುಬೆ 17 ರನ್, ಮೋಹಿತ್ ಬಿಎ ಅಜೇಯ 20 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
5 ವಿಕೆಟ್ ಗೊಂಚಲು ಪಡೆದು ಮಂಗಳೂರು ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ ಹುಬ್ಬಳ್ಳಿ ಟೈಗರ್ಸ್ ತಂಡದ ಮನ್ವಂತ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications