ಮಹಾರಾಜ ಟ್ರೋಫಿ 2023: ಪಾರಸ್ ಗುರ್ಬಾಕ್ಸ್ ಆರ್ಯ ಮಾರಕ ಬೌಲಿಂಗ್; ಬೆಂಗಳೂರು ವಿರುದ್ಧ ಗೆದ್ದ ಮಂಗಳೂರು
ಸೋಮವಾರ, ಆಗಸ್ಟ್ 21ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಮಂಗಳೂರು ಡ್ರಾಗನ್ಸ್ ತಂಡವು 31 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ನಾಯಕತ್ವದ ಮಂಗಳೂರು ಡ್ರಾಗನ್ಸ್ ತಂಡವು ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸುವ ಮೂಲಕ ಅಮೂಲ್ಯ ಎರಡು ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಡ್ರಾಗನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು.
ಇದಕ್ಕುತ್ತರವಾಗಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಶುಭಾಂಗ್ ಹೆಗ್ಡೆ ಅವರ ಅಮೋಘ ಅರ್ಧಶತಕ ಹೊರತಾಗಿಯೂ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 140 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು 31 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಮಂಗಳೂರು ಡ್ರಾಗನ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಸಿದ್ಧಾರ್ಥ್ 23 ರನ್ ಮತ್ತು ರೋಹನ್ ಪಾಟೀಲ್ 28 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಬಂದ ಶರತ್ ಬಿಆರ್ 21 ರನ್, ಗೌರವ್ ದಿಮನ್ 11 ರನ್ ಗಳಿಸಿದರು.

ಬಳಿಕ ಅನಿರುದ್ಧ್ ಜೋಶಿ 26 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 39 ರನ್ ಗಳಿಸಿದರೆ, ಅನೀಶ್ವರ್ ಗೌತಮ್ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 32 ರನ್ ಸಿಡಿಸಿದರು.
ಇನ್ನು ಬೆಂಗಳೂರು ಬ್ಲಾಸ್ಟರ್ಸ್ ತಂಡ ಪರ ಬೌಲಿಂಗ್‌ನಲ್ಲಿ ಪ್ರದೀಪ್ ಟಿ 3 ಓವರ್‌ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರೆ, ಎಲ್ಆರ್ ಕುಮಾರ್ 3 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು, ಸರ್ಫರಾಜ್ ಅಶ್ರಫ್ 3 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಉಳಿದಂತೆ ಶುಭಾಂಗ್ ಹೆಗ್ಡೆ ಒಂದು ವಿಕೆಟ್ ಬಾಚಿಕೊಂಡರು.
ಇನ್ನು ಮಂಗಳೂರು ಡ್ರಾಗನ್ಸ್ ತಂಡ ನೀಡಿದ್ದ 172 ರನ್‌ಗಳ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆರಂಭಿಕರಾದ ದೆಗಾ ನಿಶ್ಚಲ್ 9 ರನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ 13 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 23 ರನ್ ಗಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಜೆಸ್ವಂತ್ ಆಚಾರ್ಯ, ಪವನ್ ದೇಶಪಾಂಡೆ ಸೂರಜ್ ಅಹುಜಾ ರನ್ ಗಳಿಸಲು ವಿಫಲರಾದರು. ಇನ್ನು ಶುಭಾಂಗ್ ಹೆಗ್ಡೆ 41 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಮೂಲಕ 54 ರನ್ ಬಾರಿಸಿದರು. ಆಶಿಶ್ ಮಹೇಶ್ 11 ರನ್ ಮತ್ತು ಸರ್ಫರಾಜ್ ಅಶ್ರಫ್ 23 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ವೈಫಲ್ಯ ಅನುಭವಿಸಿದರು.
ಬೌಲಿಂಗ್‌ನಲ್ಲಿ ಮಂಗಳೂರು ಡ್ರಾಗನ್ಸ್ ತಂಡದ ಪಾರಸ್ ಗುರ್ಬಾಕ್ಸ್ ಆರ್ಯ ಮಾರಕ ಬೌಲಿಂಗ್ ಪ್ರದರ್ಶನ ನೀಡಿ 4 ಓವರ್‌ಗಳಲ್ಲಿ 22 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರೆ, ಆನಂದ್ ದೊಡ್ಡಮನಿ 3 ಓವರ್‌ಗಳಲ್ಲಿ 20 ರನ್ ನೀಡಿ 2 ವಕೆಟ್ ಕಬಳಿಸಿದರು.
ಉಳಿದಂತೆ ಕೃಷ್ಣಪ್ಪ ಗೌತಮ್ ಮತ್ತು ಆದಿತ್ಯ ಗೋಯಲ್ ತಲಾ ಒಂದೊಂದು ವಿಕೆಟ್ ಕಿತ್ತರು. 5 ವಿಕೆಟ್ ಪಡೆದ ಮಂಗಳೂರು ಡ್ರಾಗನ್ಸ್ ತಂಡದ ಪಾರಸ್ ಗುರ್ಬಾಕ್ಸ್ ಆರ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನ್ನು ಬೆಂಗಳೂರು ಬ್ಲಾಸ್ಟರ್ಸ್ ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ, ಆಗಸ್ಟ್ 22ರಂದು ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಸೆಣಸಾಡಲಿದ್ದರೆ, ಮಂಗಳೂರು ಡ್ರಾಗನ್ಸ್ ತಂಡ ಬುಧವಾರ, ಆಗಸ್ಟ್ 23ರಂದು ಮೈಸೂರು ವಾರಿಯರ್ಸ್ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications