ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯು ಅಂತಿಮ ಹಂತಕ್ಕೆ ತಲುಪುತ್ತಿದೆ ಮತ್ತು ಆರು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಶನಿವಾರ, ಆಗಸ್ಟ್ 26ರಂದು ನಡೆದ 28ನೇ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ತಂಡವು 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಕಳೆದ ಪಂದ್ಯದಲ್ಲಿ ಸೋತಿದ್ದ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡವು ಗೆಲುವಿನ ಹಳಿಗೆ ಮರಳಿದ್ದಲ್ಲದೆ, ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಇನ್ನು ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ವಿಜಯಕುಮಾರ್ ವೈಶಾಕ್ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಇಲ್ಲಿ ಸೋತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. 154 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡ 18 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಅಲ್ಲದೆ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.
ಬ್ಯಾಟಿಂಗ್‌ನಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಪರ ಎಲ್ಆರ್ ಚೇತನ್ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 34 ರನ್ ಗಳಿಸಿದರೆ, ಆದರ್ಶ್ ಪ್ರಜ್ವಲ್ 11 ರನ್ ಗಳಿಸಿದರು.

ಬಳಿಕ ಬಂದ ಮ್ಯಾಕ್ನೆಲ್ ನೊರಾನ್ನಾ 25 ರನ್, ಸ್ಮರಣ್ 3 ರನ್, ಅನೀಶ್ ಕೆವಿ 19 ರನ್, ಅಮಿತ್ ವರ್ಮಾ 9 ರನ್, ಶ್ರೀನಿವಾಸ್ ಶರತ್ 26 ರನ್, ಅವಿನಾಶ್ ಡಿ 19 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ಮೈಸೂರು ವಾರಿಯರ್ಸ್ ಪರ ಜಗದೀಶ್ ಸುಚಿತ್ 4 ಓವರ್‌ಗಳಲ್ಲಿ 28 ರನ್ ನೀಡಿ 3 ವಿಕೆಟ್ ಕಬಳಿಸಿದರು. ಕುಶಾಲ್ ವಧ್ವಾನಿ 4 ಓವರ್‌ಗಳಲ್ಲಿ 17 ರನ್ ನೀಡಿ 2 ವಿಕೆಟ್ ಪಡೆದರೆ, ಕೆ ಶಶಿಕುಮಾರ್ ಒಂದು ವಿಕೆಟ್ ಪಡೆದರು.
154 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ಪರ ಆರಂಭಿಕರಾದ ಎಸ್‌ಯು ಕಾರ್ತಿಕ್ 20 ರನ್ ಗಳಿಸಿದರೆ, ರವಿಕುಮಾರ್ ಸಮರ್ಥ್ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ ಅಜೇಯ 62 ರನ್ ಬಾರಿಸಿದರು. ನಾಯಕ ಕರುಣ್ ನಾಯರ್ 24 ಎಸೆತಗಳಲ್ಲಿ 23 ರನ್ ಮತ್ತು 21 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಸಮೇತ ಅಜೇಯ 39 ರನ್ ಬಾರಿಸಿದರು.
ಮೈಸೂರು ವಾರಿಯರ್ಸ್ ತಂಡದ ಪರ ಭರ್ಜರಿ ಅರ್ಧಶತಕ ಬಾರಿಸಿದ ರವಿಕುಮಾರ್ ಸಮರ್ಥ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.